ಟಿಪ್ಪರ್/ಲಾರಿಗಳ ಅಬ್ಬರಕ್ಕೆ ಬೆದರಿದ ಕುಂದ್ರಳ್ಳಿ ಗ್ರಾಮಸ್ಥರು: ವಾಹನ ತಡೆದು ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಓವರ್ ಲೋಡ್ ಟಿಪ್ಪರ್/ಲಾರಿಗಳ ಅಬ್ಬರಕ್ಕೆ ಬೆದರಿದ ಕುಂದ್ರಳ್ಳಿ ಗ್ರಾಮಸ್ಥರು ಶನಿವಾರ ಸಂಜೆ ಹತ್ತಾರು ಟಿಪ್ಪರ್‌ಗಳನ್ನು ತಡೆದು, 3-4 ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

Advertisement

ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆಯರಾದ ಗಂಗವ್ವ ಮುಂದಿನಮನಿ, ಕರಿಯವ್ವ ಪೂಜಾರ ಮತ್ತಿತರರು ಹಲಗೂ-ರಾತ್ರಿ ಎನ್ನದೇ ಮರಳು, ಎಂ ಸ್ಯಾಂಡ್, ಖಡಿ ತುಂಬಿದ ಬಾರೀ ಗಾತ್ರದ ವಾಹನಗಳು ಸಂಚರಿಸುವುದರಿಂದ ಊರಿನ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.

ಮೊದಲೇ ಎದುರು ವಾಹನ ಬಂದರೆ ಪಾರಾಗಿ ಹೋಗದಂತಹ ಅತ್ಯಂತ ಇಕ್ಕಟ್ಟಾದ ರಸ್ತೆ, ವಾಹನಗಳ ಶಬ್ದಕ್ಕೆ ನಿದ್ದೆಯೂ ಬರುವುದಿಲ್ಲ. ಧೂಳಿಗೆ ಎಲ್ಲರ ಆರೋಗ್ಯ ಹಾಳಾಗಿದೆ. ಯಮಸ್ವರೂಪಿ ವಾಹನ ಸಂಚಾರದಿಂದ ಮಕ್ಕಳು, ಹಿರಿಯರನ್ನು ಮನೆಯಿಂದ ಹೊರ ಕಳಿಸಲೂ ಭಯವಾಗುತ್ತದೆ.

ಇದು ಇಂದು-ನಿನ್ನೆಯ ಸಮಸ್ಯೆಯಾಗಿದೇ ಹತ್ತಾರು ವರ್ಷಗಳಿಂದಲೂ ಅನುಭವಿಸುತ್ತಿದ್ದೇವೆ. ಈ ಬಗ್ಗೆ ತಹಸೀಲ್ದಾರ, ಪೊಲೀಸರು, ಗ್ರಾಮ ಪಂಚಾಯಿತಿ, ಜನಪ್ರತಿನಿಧಿಗಳು, ಆರ್‌ಟಿಓ ಸೇರಿ ಎಲ್ಲರೆದುರಿಗೂ ಅಳಲು ತೋಡಿಕೊಂಡಿದ್ದರೂ ನಮ್ಮ ಕೂಗು ಅರಣ್ಯರೋಧನವಾಗಿದೆ.

ಯಾರ ಭಯವೂ ಇಲ್ಲದೇ ರ‍್ರಾಬರ‍್ರಿ ಹೋಗುವ ವಾಹನದವರಿಗೆ ಹೇಳಿದರೆ ರಸ್ತೆ ಏನ್ ನಿಮ್ಮಂಪ್ಪದೇನು ಎಂದು ಜನರ ಮೇಲೆಯೇ ಎರಗುತ್ತಾರೆ. ಇವರಿಗೆ ರಾಜಕಾರಣಿಗಳು, ಅಧಿಕಾರಿಗಳ ಬಲವಿದ್ದು ನಮ್ಮ ಗೋಳು ಯಾರ ಮುಂದೆ ಹೇಳಬೇಕು ಎಂದು ನೊಂದು ನುಡಿದರು.

ಗ್ರಾ.ಪಂ ಸದಸ್ಯ ಮಂಜುನಾಥ ಗೌರಿ ಮಾತನಾಡಿ, ಇಕ್ಕಟ್ಟಾದ ರಸ್ತೆಯಲ್ಲಿ ನಿತ್ಯ 10-12 ಗಾಲಿಗಳುಳ್ಳ ಟಿಪ್ಪರ್, ಲಾರಿಗಳು ತುಂಗಭದ್ರಾ ನದಿ ಪಾತ್ರದಿಂದ ಮರಳು, ಸಮೀಪದ ಚಬ್ಬಿ, ದೇವಿಹಾಳ ಭಾಗದಿಂದ 40 ಟನ್ ಭಾರದ ಎಂ ಸ್ಯಾಂಡ್ ಸಾಗಿಸುತ್ತವೆ.

ಪದೇ ಪದೇ ರಸ್ತೆ ರಿಪೇರಿ, ನೀರಿನ ಪೈಪ್‌ಲೈನ್ ದುರಸ್ತಿ ಮಾಡಿಸಿ ಸಾಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇವತ್ತು ಮುಳಗುಂದದಲ್ಲಿ ಚಿಕ್ಕ ಮಗುವಿನ ಮೇಲೆ ಟಿಪ್ಪರ್ ಹರಿದು ಹೋಗಿದೆ,

ಗ್ರಾಮಸ್ಥರು ಭಯಭೀತರಾಗಿದ್ದಾರೆ. ಯಾವುದೇ ರೀತಿಯ ಅಪಾಯ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾ.ಪಂ ಅಧ್ಯಕ್ಷರಾದ ಶಾಂತವ್ವ ಹಡಪದ, ಉಪಾಧ್ಯಕ್ಷರಾದ ಮಲ್ಲಮ್ಮ ಬಸಪ್ಪ ತಳವಾರ, ಬಸವರಾಜ ಮೇಟಿ, ಚಂದ್ರು ಹಡಪದ, ಪ್ರಕಾಶ ತಳವಾರ, ನಾಗರಾಜ ಪಾಟೀಲ, ಫೀರಜಾನಸಾಬ ನದಾಫ್, ಮಾಯವ್ವ ಕಳಸದ, ಸಾಹೇಬಜಾನ್‌ಸಾಬ ನದಾಫ್, ಗಂಗವ್ವ ಮುಂದಿನಮನಿ, ಫಾರೀಜಾನ ನದಾಫ್, ನಿಂಗವ್ವ ಮೂಲಿಮನಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಗ್ರಾಮಸ್ಥರಿದ್ದರು.

2 ಗಂಟೆಗಳ ನಂತರ ವಿಷಯ ತಿಳಿದ ಶಿರಹಟ್ಟಿ ಪೊಲೀಸ್ ಠಾಣೆಯಿಂದ ಆಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಸಂಚಾರ ಮುಕ್ತಗೊಳಿಸಿದರು.

ಸಂಚಾರ ಸ್ಥಗಿತ

ಗದಗ-ಲಕ್ಮೇಶ್ವರ ರಸ್ತೆ ಹಾಳಾಗಿದ್ದರಿಂದ ಕಳೆದ ಕೆಲ ತಿಂಗಳುಗಳಿಂದ ಕುಂದ್ರಳ್ಳಿ ಪ್ಲಾಟ್‌ನಲ್ಲಿನ ಕೇವಲ 10-12 ಅಡಿ ಅಗಲದ ರಸ್ತೆಯ ಮೂಲಕವೇ ಬಸ್ಸು, ಕಾರು, ಬೈಕ್‌ಗಳ ಜತೆಗೆ ಟಿಪ್ಪರ್‌ಗಳ ಅಬ್ಬರ ಜೋರಾಗಿದ್ದರಿಂದ ಇಲ್ಲಿನ ಜನರು ರೋಸಿ ಹೋಗಿದ್ದಾರೆ. ಶನಿವಾರ ರೊಚ್ಚಿಗೆದ್ದ ಗ್ರಾಮಸ್ಥರು ಗಂಟೆಗಳ ಕಾಲ ವಾಹನ ತಡೆದಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರೂ ಸಹ ಪರದಾಡುವಂತಾಗಿತ್ತು. ಮೊದಲು ಚಿಕ್ಕದಾಗಿಯೇ ಪ್ರಾರಂಭವಾದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಟಿಪ್ಪರ್, ಲಾರಿಗಳ ಚಾಲಕರ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here