ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದಂತೆ ಸಾಂಪ್ರದಾಯಿಕ ಹೋಳಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಅಡರಕಟ್ಟಿ, ಮಂಜಲಾಪುರ, ಬಡ್ನಿ, ಬಟ್ಟೂರ, ಆದ್ರಳ್ಳಿ, ಸೋಗಿವಾಳ, ಸಂಕದಾಳ, ಸೂರಣಗಿ, ಕೊಕ್ಕರಗೊಂದಿ, ದೊಡ್ಡೂರ, ಶ್ಯಾಬಳ, ಉಳ್ಳಟ್ಟಿ, ಗೊಜನೂರ, ಅಕ್ಕಿಗುಂದ, ಯಳವತ್ತಿ, ಮಾಡಳ್ಳಿ, ಯತ್ನಳ್ಳಿ ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಯುವಕರು, ಮಕ್ಕಳು ಪರಸ್ಪರ ಬಣ್ಣ ಎರಚಿ ರಂಗಿನೋಕುಳಿಯಲ್ಲಿ ಮಿಂದೆದ್ದರು.
ಬೆಳಿಗ್ಗೆಯೇ ಮಕ್ಕಳು ಬಣ್ಣದ ನೀರು ತುಂಬಿದ್ದ ಪಿಚಕಾರಿ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಹಿಡಿದು ಪರಸ್ಪರ ಬಣ್ಣ ಎರಚಿ ಖುಷಿಪಟ್ಟರು. ಸುಡುಬಿಸಿಲು ಲೆಕ್ಕಿಸದೇ ಹಲವೆಡೆ ಅಣುಕು ಶವಯಾತ್ರೆ ನಡೆಸಿ, ಆಕರ್ಷಕ ಉಡುಗೆ ತೊಟ್ಟು ಹಲಗೆಯ ತಾಳಕ್ಕೆ ತಕ್ಕಂತೆ ಕುಣಿದರು. ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಗೊಜನೂರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಎತ್ತಿನ ಬಂಡಿ ಮೆರವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಓಕುಳಿ ಬಳಿಕ ಕಾಮನ ದಹನದ ಸಂಪ್ರದಾಯ ನೆರವೇರಿಸಲಾಯಿತು. ಮಂಗಳವಾರವೂ ಕೆಲವು ಗ್ರಾಮಗಳಲ್ಲಿ ಓಕುಳಿ ಹಬ್ಬ ನಡೆದಿದೆ. ಗುರುವಾರ ತಾಲೂಕಿನ ಒಡೆಯರಮಲ್ಲಾಪುರ ಗ್ರಾಮದಲ್ಲಿ ಬಣ್ಣದ ಹಬ್ಬ ಆಚರಿಸಲಾಗುತ್ತಿದೆ. ಇನ್ನು ಶನಿವಾರ ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿ ರಂಗಪಂಚಮಿ ಆಚರಿಸಲಾಗುತ್ತಿದೆ. ಆದರೆ ಈ ವರ್ಷ ಶಿಗ್ಲಿ ಗ್ರಾಮದಲ್ಲಿ ಇತ್ತೀಚೆಗೆ ಗ್ರಾಮದೇವಿ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಬಣ್ಣದಾಟ ಆಡದೆ ಕೇವಲ ಕಾಮದಹನ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಹಬ್ಬದ ಆಚರಣೆ ಪೂರ್ಣಗೊಳಿಸಿ ಆರೋಗ್ಯ ಕಾಪಾಡಿಕೊಳ್ಳಿ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ನೀರನ್ನು ಹಿತ-ಮಿತವಾಗಿ ಬಳಸಲು ಪುರಸಭೆ ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಮನವಿ ಮಾಡಿದ್ದಾರೆ.



