ರಸ್ತೆಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನಿನ್ನೆ (ಮಾ.25) ರಾತ್ರಿ ಇಬ್ಬರನ್ನೂ ಕೋರಮಂಗಲದಲ್ಲಿರುವ 24ನೇ ಎಸಿಜೆಎಂ ಜಡ್ಜ್ ನಿವಾಸಕ್ಕೆ ಪೊಲೀಸರು ಕರೆದುಕೊಂಡು ಹೋಗಿ ಕೆಲ ಸಮಯ ವಿಚಾರಣೆ ನಡೆಸಿದ್ದಾರೆ. ಬಳಿಕ ಇಬ್ಬರಿಗೂ ಒಂದು ದಿನ ನ್ಯಾಯಾಂಗ ಬಂಧನ ನೀಡಿ ನ್ಯಾಯಾಧೀಶರು ಆದೇಶಿಸಿದರು. ಪತಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುತ್ತಿದ್ದಂತೆ ರಜತ್ ಪತ್ನಿ ಕಣ್ಣೀರು ಹಾಕಿದ್ದಾರೆ.
ನಿನ್ನೆ ರಾತ್ರಿ ಪೂರ್ತಿ ವಿನಯ್ ಹಾಗೂ ರಜತ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದಾರೆ. ಇಂದು ಇಬ್ಬರನ್ನು ಮತ್ತೆ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ಈ ವೇಳೆ ಒಂದು ವಾರ ಪೊಲೀಸ್ ಕಸ್ಟಡಿಗೆ ಕೊಡಿವಂತೆ ಪೊಲೀಸರು ಮನವಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನೂ ವಿಚಾರಣೆ ಬಾಕಿ ಇದೆ. ಅಲ್ಲದೆ, ರೀಲ್ಸ್ ಮಾಡಲು ಬಳಕೆ ಮಾಡಿದ್ದ ಮಚ್ಚು ನಾಪತ್ತೆಯಾಗಿದೆ. ಹೀಗಾಗಿ, ಇದರ ಬಗ್ಗೆ ವಿಚಾರಣೆಯ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಧೀಶರಿಗೆ ತಿಳಿಸುವ ಸಾಧ್ಯತೆ ಇದೆ.
ರಜತ್ ಹಾಗೂ ವಿನಯ್ ಇಂದು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಇವರ ಪರ ವಕೀಲರು ಇಬ್ಬರಿಗೂ ಜಾಮೀನು ಕೇಳಿ ಕೋರ್ಟ್ನಲ್ಲಿ ಮನವಿ ಮಾಡಲಿದ್ದಾರೆ. ಕೋರ್ಟ್ನಲ್ಲಿ ಇಬ್ಬರ ಭವಿಷ್ಯ ನಿರ್ಧಾರವಾಗಲಿದೆ.