ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶೇ 100ರಷ್ಟು ಮತದಾನವಾಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರು ಹೇಳಿದರು.
ನಗರದ ಪಂಪ್ ಸರ್ಕಲ್‌ನಲ್ಲಿ ಲಕ್ಷ್ಮೇಶ್ವರ ತಾಲೂಕು ಸ್ವೀಪ್ ಸಮಿತಿ, ತಾಲೂಕು ಪಂಚಾಯಿತಿ, ತಾಲೂಕಾಡಳಿತ, ಪುರಸಭೆ ಲಕ್ಷ್ಮೇಶ್ವರ, ತಾಲೂಕು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ, ಮಾನವ ಸರಪಳಿ ಮತ್ತು ಶಾಲಾ ಮಕ್ಕಳಿಂದ ಪಿರಾಮಿಡ್ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೇ 7ರಂದು ಲೋಕಸಭೆ ಚನುವಾಣೆಗೆ ಮತದಾನ ನಡೆಯಲಿದ್ದು, ಎಲ್ಲ ಅರ್ಹ ಮತದಾರರು ಒತ್ತಡಗಳನ್ನು ಬದಿಗೊತ್ತಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಆಮಿಷಗಳಿಗೆ ಮರುಳಾಗದೆ ತಮ್ಮ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಸಂವಿಧಾನವು ಎಲ್ಲರಿಗೂ ಮತದಾನದ ಹಕ್ಕನ್ನು ನೀಡಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಸದೃಢ ಪ್ರಜಾಪ್ರಭುತ್ವಕ್ಕೆ ಯುವ ಜನರು ಮತದಾನದಲ್ಲಿ ಭಾಗಿಯಾಗುವುದು ಅತ್ಯವಶ್ಯ ಎಂದರು.
ಶಿಕ್ಷಣ ಇಲಾಖೆಯ ಈಶ್ವರ ಮೆಡ್ಲೇರಿ, ಪಿಡಿಒ ಬಸವರಾಜ ಬಳೂಟಗಿ, ವಿವಿಧ ಶಾಲೆಗಳ ಶಿಕ್ಷಕ್ಕರು, ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾ.ಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.