ಮತ್ತೆ ಬಂದಿದೆ ಯುಗಾದಿ : ಯುಗಾದಿ ಹಬ್ಬದ ಶುಭಾಶಯಗಳು

0
hombal
Spread the love

ಬೇವು ಬೆಲ್ಲ
ಮಾವು ನಾವು, ಬೇವು ನಾವು,
ನೋವು ನಲಿವು ನಮ್ಮವು
ಹೂವು ನಾವು, ಹಸಿರು ನಾವು,
ಹೊಸತು ವರುಷ, ಹೊಸತು ಹರುಷ,
ಹೊಸತು ಬಯಕೆ ನಮ್ಮವು,
ತಳಿರ ತುಂಬಿದಾಸೆಯಲ್ಲ
ಹರಕೆಯೆಲ್ಲ ನಮ್ಮವು

Advertisement

ಕೆ.ಎಸ್. ನರಸಿಂಹಸ್ವಾಮಿಯವರು ಯುಗಾದಿಯ ಬಗ್ಗೆ ಬೇವು-ಬೆಲ್ಲದ ಸವಿ ಉಣಿಸಿದ್ದಾರೆ. ಯುಗಾದಿ ಹೊಸವರ್ಷದ ಆರಂಭದ ದಿನ. ಬ್ರಹ್ಮ ಸೃಷ್ಟಿಯನ್ನು ಆರಂಭಿಸಿದ ದಿನವೆಂದೂ, ಶ್ರೀರಾಮನು ಅಯೋಧ್ಯಗೆ ಹಿಂದಿರುಗಿ ಪಟ್ಟಾಭಿಷಿಕ್ತನಾದ ದಿನವೆಂದೂ ಈ ದಿನವನ್ನು ಪರಿಗಣಿಸಲಾಗಿದೆ.

ಮತ್ತೆ ಬಂದಿದೆ ಯುಗಾದಿ. ಎಲ್ಲ ಗಿಡಮರಗಳ ಎಲೆಗಳನ್ನು ಅದು ಮಾಗಿಸುತ್ತ, ಯುಗಾದಿಯ ಹೊತ್ತಿಗೆ ಹಳೆ ಎಲೆಗಳು ಭೂದೇವಿಯ ಒಡಲು ಸೇರಿ ಸಾರ್ಥಕ್ಯ ಪಡೆದು ಹೊಸ ಎಲೆಗಳು ತಮ್ಮ ಹುರುಪಿನ, ತಮ್ಮ ತಿಳಿಹಸಿರಿನ ಚಿಗುರಿನೊಂದಿಗೆ ಪ್ರೀತಿ, ಪ್ರೇಮದ ಸಂಕೇತಗಳನ್ನೊತ್ತು ಸೂರ್ಯನನ್ನು ಬರಮಾಡಿಕೊಂಡು ಮನುಜರಿಗಾಗಿ ಧಾರೆ ಎರೆಯುವ ಈ ಯುಗಾದಿಗೆ, ನಮಗಾಗಿ ಹೊಸಬಾಳು, ಹೊಸ ಜೀವನ, ಹೊಸ ದಿನ, ಹೊಸ ಬಟ್ಟೆ, ಹೊಸ ಮನಸ್ಸು, ಹೊಸ ಊಟ ಹೀಗೆ ಎಲ್ಲವೂ ಹೊಸತು ತಂದು ಹರಷದ ಕ್ಷಣದಲ್ಲಿ ಹೊಸವನ್ನು ಮೆರೆಯುವದೆ ಯುಗಾದಿ.

ನಮ್ಮ ಜೀವನದಲ್ಲಿ ಹಳೆಯದನ್ನು ಮರೆತು ಹೊಸದರ ಕಡೆ, ನೋವನ್ನು ಮರೆತು ನಲಿವಿನ ಕಡೆ, ಬೆಳಗಿನ ಸೂರ್ಯೋದಯದ ಕಿರಣಗಳು ಭೂದೇವಿಗೆ ಅಪ್ಪಳಿಸಿದಾಗ ಹೊಸ ನೀರಿನಲ್ಲ ಬೇವಿನ ಹೂವಿನಿಂದೊಡಗೂಡಿದ ನೀರಿನಿಂದ ಸ್ನಾನ ಮಾಡಿ, ಬೇವು-ಬೆಲ್ಲವನ್ನು ಆಪ್ತ ಗೆಳತಿಯರಿಗೆ, ಹೊಸ ಗೆಳತಿಯರಿಗೆ, ಮನೆ ಮಂದಿಯರೊಂದಿಗೆ ಪರಸ್ಪರ ಹಂಚಿ ಮತ್ತೆ ಅವರಿಂದ ಪಡೆದುಕೊಂಡು ಬಾಳಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸನ್ನಾಗಿಸುವದೇ ಯುಗಾದಿ.

ಕಷ್ಟ ಬಂದಾಗ ಆ ದೇವರನ್ನು ನೆನಸುತ್ತ, `ನಿನಗೆ ನಾನು ದಿನವೂ ಕೈಮುಗಿದು, ತುಪ್ಪದ ದೀಪವ ಹಚ್ಚಿದರೂ ನನಗೆ ಯಾಕೆ ಇಂಥಹ ಕಷ್ಟಗಳನ್ನು ಕೊಟ್ಟೆ’ ಎಂದು ಆ ದೇವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೀರಿ. ಸುಖ ಬಂದಾಗ ಎಲ್ಲಿ ಹೋಗಿರುತ್ತೆ ಆ ದೇವರ ನೆನಪು! ನಾಣ್ಯದ ಎರಡು ಮುಖಗಳು ಹೇಗಿದೆಯೋ, ಹಾಗೇಯೇ ನಮ್ಮ ಜೀವನದಲ್ಲಿ ನೋವು-ನಲಿವು, ಸುಖ-ಕಷ್ಟ, ಸೋಲು-ಗೆಲವುಗಳು ಸಮಾನವಾಗಿರುತ್ತವೆ. ಪ್ರಕೃತಿಗೆ ಸಮವಾಗಿ ನಿಲ್ಲಲು ಸಾಧ್ಯವಿಲ್ಲ.

ಪ್ರಕೃತಿಗೆ ಮಾತ್ರ ದಯೆಯ ಒಂದು ಅದ್ಭುತ, ಆಚ್ಚರಿ. ಮತ್ತೆ ಮತ್ತೆ ಬದಕಬೇಕು, ಸಕಲ ಜೀವ ಕೋಶಗಳು ಜೀವಿಸಬೇಕು ಎನ್ನುವ ಅದಮ್ಯ ಚೇತನದ ಸಂಕೇತವೇ ಯುಗಾದಿ. ಮನಸ್ಸನ್ನು ಹಸಿರಾಗಿಸಿಕೊಳ್ಳಬೇಕು, ನೋವನ್ನು ಮರೆಯಬೇಕು, ನಾಳೆಯದನ್ನು ವಿಚಾರಿಸಿ, ಅನುಭವಿಸಿ, ಸಂತೋಷ ಪಟ್ಟುಕೊಳ್ಳಿ. ಹತ್ತಿರದ ನಿಮ್ಮವರನ್ನು ಸಂತೋಷವಾಗಿರಿಸಿ. ಗುರಿ, ಸಾಧನೆ, ಮುಟ್ಟಿ ಸಂಭ್ರಮಿಸಿ. ನೋವು ಬಂದಾಗ ಧೈರ್ಯದಿಂದ ಎದುರಿಸಿರಿ, ಆಗ ಆ ನೋವು ತಾನಾಗಿಯೇ ನಶಿಸುತ್ತದೆ. ದೈವಭಕ್ತಿ ಇರಲಿ ತನುಮನದಲ್ಲಿ, ದೇವರು ದೇವಸ್ಥಾನ ದೇವಾಲಯಗಳಲ್ಲಿ ಸುಮಧುರ ಗಂಟೆಯ ನಾದ, ದೇವರ ಭಕ್ತಿಯ ಪೂಜೆ, ಮೈಮನಸ್ಸಿನ ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಈ ಹಬ್ಬದ ಸವಿಯನ್ನು ಸವಿಯೋಣ.

ಎಲ್ಲರಿಗೂ ಸವಿಸೋಣ, ಬೇವು-ಬೆಲ್ಲವ ಎಲ್ಲರಿಗೂ ಹಂಚೋಣ, ಅವರ ನೋವನ್ನು
ನಮ್ಮದಾಗಿಸಿಕೊಂಡು ನಲಿವಿನ ಸವಿಯನ್ನು ಪರರಿಗೆ ಧಾರೆ ಎರೆಯೋಣ. ಅದುವೇ ಯುಗಾದಿ. ಪಡುವಣದಲ್ಲಿ ಗೋಧೂಳಿ ಸವಿ ರಾಗರತಿಯಿಂದ ಇಳಿದು, ಸಕಲ ಜೀವರಾಶಿಗಳ ಬದುಕನ್ನು ಸೂಕ್ತ ರೀತಿಯಲ್ಲಿ ನೋವು-ನಲಿವಿನೊಂದಿಗೆ ಸವಿದು, ಯುಗಾದಿ ತೇರು ಎಳೆಯೋಣ.

– ಡಾ. ತಯಬಅಲಿ ಅ.ಹೊಂಬಳ.
ಗದಗ.


Spread the love

LEAVE A REPLY

Please enter your comment!
Please enter your name here