HomeUncategorizedಚುನಾವಣಾ ಹಬ್ಬದಲ್ಲಿ ತಪ್ಪದೇ ಮತ ಚಲಾಯಿಸಿ : ಸಿ.ಬಿ. ದೇವರಮನಿ

ಚುನಾವಣಾ ಹಬ್ಬದಲ್ಲಿ ತಪ್ಪದೇ ಮತ ಚಲಾಯಿಸಿ : ಸಿ.ಬಿ. ದೇವರಮನಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಈಗ ಹಬ್ಬದ ಸಮಯ ಶುರುವಾಗಿದೆ. ಅದರಲ್ಲಿ ಚುನಾವಣೆಯೂ ಒಂದು ಹಬ್ಬ. ಈ ಹಬ್ಬದಲ್ಲಿ ಎಲ್ಲರೂ ತಪ್ಪದೇ ಮತ ಚಲಾವಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಗದಗ, ತಾಲೂಕಾ ಸ್ವೀಪ್ ಸಮಿತಿ ಮುಂಡರಗಿ ಹಾಗೂ ಗ್ರಾಮ ಪಂಚಾಯಿತಿ ಬಿದರಹಳ್ಳಿ ಸಹಯೋಗದಲ್ಲಿ ಗುರುವಾರ ಮುಂಡವಾಡ ಗ್ರಾಮದ ಕೆರೆ ಹೂಳೆತ್ತುವ ನರೇಗಾ ಸಮುದಾಯ ಕಾಮಗಾರಿ ಸ್ಥಳದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ `ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಗುಳೇ ತಪ್ಪಿಸಲು ಈಗಾಗಲೇ ನರೇಗಾ ಸಮುದಾಯ ಕಾಮಗಾರಿಗಳು ತಾಲೂಕಿನಾದ್ಯಂತ ಆರಂಭವಾಗಿವೆ. ಮೇ ತಿಂಗಳ 7ನೇ ತಾರೀಕಿಗೆ ನಿಗದಿಯಾಗಿರುವ ಲೋಕಸಭಾ ಚುನಾವಣೆಯಲ್ಲಿ ನರೇಗಾ ಕೂಲಿಕಾರರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕು. ನೀವು ಕಡ್ಡಾಯವಾಗಿ ಮತ ಹಾಕುವುದರ ಜೊತೆಗೆ ನಿಮ್ಮ ಕುಟುಂಬ ಹಾಗೂ ನೆರೆ ಹೊರೆಯವರನ್ನು ತಪ್ಪದೇ ಮತದಾನ ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.

matadana

ಮತ ಚಲಾಯಿಸುವ ಪ್ರತಿಯೊಬ್ಬ ನಾಗರಿಕನೂ ಸುಭದ್ರ ದೇಶ ನಿರ್ಮಿಸಲು ಕೊಡುಗೆ ನೀಡಿದಂತೆ. ಮತದಾನ ದಿನದಂದು ಯಾರೂ ಸಮಯ ವ್ಯರ್ಥ ಮಾಡದೆ ನಿಗದಿತ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಿ. ಬಿದರಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶೇ.100ರಷ್ಟು ಮತದಾನ ನಡೆಯಬೇಕು ಎಂದರು.

`ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನ ಎರಡು ತಿಂಗಳುಗಳ ಕಾಲ ನಿರಂತರವಾಗಿ ನಡೆಯಲಿದೆ. ನಿಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿಯೇ ನಿಮಗೆ ಕೆಲಸ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನರೇಗಾ ಕೂಲಿ ಮೊತ್ತ ಈಗ 349 ರೂಪಾಯಿಗೆ ಏರಿಕೆಯಾಗಿದ್ದು, ಅಳತೆಗೆ ತಕ್ಕಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ. ಕೂಲಿ ಮೊತ್ತ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗಲಿದೆ. ಇದರಿಂದ ಬೇಸಿಗೆ ಕಾಲದ ಒಕ್ಕಲುತನದ ವಿಷಮ ಪರಿಸ್ಥಿತಿಗಳನ್ನು ಎದುರಿಸಲು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪ್ರವೀಣ ಗೋಣೆಮ್ಮನವರ, ಗ್ರಾ.ಪಂ ಅಧ್ಯಕ್ಷೆ ಸುನೀತಾ ನಾಗಪ್ಪ ಹಾರೋಗೇರಿ, ಪಿಡಿಓ ಬಿ.ಕೆ. ಸಜ್ಜನಗೌಡರ, ಜಿ.ಪಂ ಎಡಿಪಿಸಿ ಕಿರಣ ಕುಮಾರ, ಡಿಐಇಸಿ ವಿ.ಎಸ್. ಸಜ್ಜನ, ತಾಲೂಕಾ ಸಂಯೋಜಕ ಹರೀಶ ಸೊಬರದ, ತಾಂತ್ರಿಕ ಸಹಾಯಕ ಅಂಜಿನಪ್ಪ ಸೇರಿದಂತೆ ತಾ.ಪಂ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

ವಿಭಿನ್ನ ಮತದಾನ ಜಾಗೃತಿ

ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಕಡ್ಡಾಯ ಮತದಾನದ ಜಾಗೃತಿಗಾಗಿ ಸಮುದಾಯ ಕಾಮಗಾರಿಯಲ್ಲಿ ಕಡೆದಿದ್ದ ಪಡಗಳಲ್ಲಿಯೇ ಬಣ್ಣದ ಅಕ್ಷರಗಳಿಂದ `ನನ್ನ ಮತ ನನ್ನ ಹಕ್ಕು’ ಎಂಬ ಘೋಷಣೆ ಬರೆದು ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ನರೇಗಾ ಹಾಗೂ ಮತದಾನದ ಘೋಷಣಾ ಪತ್ರಗಳನ್ನು ಹಿಡಿದ ಕೂಲಿಕಾರರು ಗಮನ ಸೆಳೆದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img