ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಅಂಬೇಡ್ಕರ ನಗರದ ನಿವಾಸಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿದರಲ್ಲದೇ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿದ್ದಾರೆ.
ಈ ವೇಳೆ ಸೇರಿದ್ದ ಹಿರಿಯರು, ಗ್ರಾಮದ ಹರಿಜನ ಕೇರಿಯ ನಿವಾಸಿಗಳಾದ ನಾವು ಸುಮಾರು 70 ವರ್ಷಗಳಿಂದಲೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದೇವೆ. ಸರಕಾರದ ಸೌಲಭ್ಯಗಳಿಂದ ವಂತಿಚತರಾಗುತ್ತಿದ್ದೇವೆ. ಗ್ರಾಮದಲ್ಲಿ ನಮ್ಮ ಮೇಲೆ ದೌರ್ಜನ್ಯಗಳಾಗುತ್ತಿವೆ.
ಸಂಬಂಧಿಸಿದ ಅಧಿಕಾರಿಗಳಿಗೆ ಗೊತ್ತಿದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ. ಹರಿಜನಕೇರಿಯಲ್ಲಿ ಮಹಿಳೆಯರಿಗೆ ಶೌಚಾಲಯ, ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಚತೆ ಇಲ್ಲದೇ ಪರದಾಡುವ ಪರಿಸ್ಥಿತಿಯಿದೆ. ಆಶ್ರಯ ನಿವೇಶನ ನೀಡಬೇಕು.
ಜಮೀನು ಇಲ್ಲದವರಿಗೆ ಸರಕಾರದಿಂದ 2 ಎಕರೆ ಜಮೀನು, ಸ್ಮಶಾನಕ್ಕೆ ಭೂಮಿ ನೀಡಬೇಕು.
ಸಮಾಜ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ತರಬೇತಿ ಹಾಗೂ ಶಿಷ್ಯವೇತನ ನೀಡುವ ವ್ಯವಸ್ಥೆಯಾಗಬೇಕು. ಗ್ರಾಮ ಪಂಚಾಯಿತಿಗೊಂದು ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಸಮಿತಿ ರಚಿಸಬೇಕು. ಸಮುದಾಯ ಭವನ ನಿರ್ಮಾಣ ಮಾಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿ ನೀಡಬೇಕು. ಒಟ್ಟಿನಲ್ಲಿ ಯತ್ತಿನಹಳ್ಳಿ ಗ್ರಾಮದ ಹರಿಜನಕೇರಿ ಜನರ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಮತ್ತು ಅಗತ್ಯ ಸೌಲಭ್ಯಗಳನ್ನು ನೀಡಿದಲ್ಲಿ ನಾವೆಲ್ಲಾ ಮತದಾನ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಂಜುನಾಥ ಮ್ಯಾಗೇರಿ, ಕರಿಯಪ್ಪ ದೊಡ್ಡಮನಿ, ಬಸವರಾಜ ಗುಂಡೂರ, ಗುರುನಾಥ ಕಲಮನಿ, ಮಲ್ಲೇಶ ಮ್ಯಾಗೇರಿ, ಮರಿಯಪ್ಪ ದೊಡ್ಡಮನಿ, ಮಾರುತಿ ತಳಗೇರಿ, ಮಂಜುನಾಥ ಸಂಧಿಮನಿ,ರೇಣುಕಾ ಹೊಸಳ್ಳಿ, ಮೈಲಾರಪ್ಪ ತಳಗೇರಿ, ರಾಮಪ್ಪ ಗುಂಡೂರ ಸೇರಿ ಅನೇಕರಿದ್ದರು.
ಅಧಿಕಾರಿಗಳ ಭೇಟಿ, ಮನವೊಲಿಕೆ
ಯತ್ತಿನಹಳ್ಳಿ ಗ್ರಾಮದ ಹರಿಜನಕೇರಿ ನಿವಾಸಿಗಳು ಪ್ರತಿಭಟನೆ ಮಾಡುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಾ.ಪಂ ಇಓ ಕೃಷ್ಣಪ್ಪ ಧರ್ಮರ ಅವರು ನಿವಾಸಿಗರ ಬೇಕು-ಬೇಡಿಕೆ, ಸಮಸ್ಯೆಗಳನ್ನು ಆಲಿಸಿ ಕೆಲವು ಸಮಸ್ಯೆಗಳನ್ನು ತಕ್ಷಣಕ್ಕೆ ಪರಿಹರಿಸಿಕೊಡಲಾಗುವುದು ಮತ್ತು ನಿಮ್ಮ ಹಲವು ಬೇಡಿಕೆಗಳನ್ನು ಹಂತಹAತವಾಗಿ ಪೂರೈಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ದಯವಿಟ್ಟು ಯಾರೂ ಮತದಾನದಿಂದ ದೂರ ಉಳಿಯುವ ಪ್ರಯತ್ನ ಮಾಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿ ಹೇಳಿ ನಿವಾಸಿಗಳ ನಡೆ ಬದಲಾಯಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಬಿ. ಕುಲಕರ್ಣಿ, ಪಿಡಿಓ ಎಂ.ಎನ್. ಮಲ್ಲೂರ ಸೇರಿ ಪೊಲೀಸ್, ಕಂದಾಯ, ಗ್ರಾ.ಪಂ ಅಧಿಕಾರಿಗಳು ಇದ್ದರು.