ಮಡಿಕೇರಿ: ರಾಜ್ಯದಲ್ಲಿ ಮಳೆ ಕೊರತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿದಿದ್ದು, ಜಲಸಂಕಷ್ಟದ ಆತಂಕ ಮೂಡಿಸಿದೆ.
ಧಾರಾಕಾರ ಮಳೆಯ ನಿರೀಕ್ಷೆಯಲ್ಲಿದ್ದ ಕೊಡಗು ಜಿಲ್ಲೆಯ ಕಾವೇರಿ ಕೊಳ್ಳದಲ್ಲಿ ಮಳೆ ಅಭಾವ ಕಂಡುಬಂದಿದ್ದು, ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ನೀರಿನ ಮಟ್ಟ ತೀವ್ರವಾಗಿ ಇಳಿಕೆಯಾಗಿದೆ. ಸಾಮಾನ್ಯವಾಗಿ 10ರಿಂದ 15 ಅಡಿ ನೀರು ಹರಿಯುವ ಪ್ರದೇಶದಲ್ಲಿ ಇದೀಗ ಕೇವಲ ಅರ್ಧ ಅಡಿಯಿಂದ ಒಂದು ಅಡಿ ನೀರು ಮಾತ್ರ ಹರಿಯುತ್ತಿರುವುದು ಕಂಡುಬಂದಿದೆ.
ನದಿಯ ಒಡಲು ಕಲ್ಲುಗಳಿಂದ ಆವೃತವಾಗಿದ್ದು, ಜಲಮಾಪಕದಲ್ಲಿ ನೀರಿನ ಮಟ್ಟ ಶೂನ್ಯಕ್ಕೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಕಾವೇರಿ ಕೊಳ್ಳದಲ್ಲಿ ಸಮರ್ಪಕ ಮಳೆಯಾಗದಿರುವುದೇ ಈ ಸ್ಥಿತಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಈ ಬೆಳವಣಿಗೆಯಿಂದ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಭೀತಿ ಎದುರಾಗಿದೆ.
ಕಾವೇರಿ ನೀರಾವರಿ ವ್ಯವಸ್ಥೆಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಹಾಗೂ ಹಾರಂಗಿ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ಜಲಸಂಕಷ್ಟ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.



