HomeKarnataka Newsನಾವು ಅಧಿವೇಶನ ಕರೆದಿರುವುದೇ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು: ಡಿ.ಕೆ. ಶಿವಕುಮಾರ್

ನಾವು ಅಧಿವೇಶನ ಕರೆದಿರುವುದೇ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು: ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಳಗಾವಿ:“ನಾವು ಅಧಿವೇಶನ ಕರೆದಿರುವುದೇ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು. ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ ಯಾಕೆ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು. ಬೆಳಗಾವಿ ವಿಮಾನ ನಿಲ್ದಾಣ ಹಾಗೂ ಸರ್ಕಿಟ್ ಹೌಸ್ ಬಳಿ ಮಂಗಳವಾರ ಬೆಳಿಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ಗ್ಯಾರಂಟಿ ಯೋಜನೆ ಬಗ್ಗೆ ಕೇಳಿದಾಗ, “ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ನಮಗೆ ಬದ್ಧತೆ ಇದೆ. ಕೇಂದ್ರ ಸರ್ಕಾರ ಜಿಎಸ್ ಟಿ ಪರಿಷ್ಕರಣೆ ಮೂಲಕ ರಾಜ್ಯದ ಆದಾಯ ಕಡಿಮೆ ಮಾಡಿದೆ. ವಾರ್ಷಿಕ 10-15 ಸಾವಿರ ಕೋಟಿ ಕೊರತೆಯಾಗಿದೆ. ನಾವು ಕೊಟ್ಟ ಮಾತಿಗೆ ಬದ್ಧವಾಗಿದ್ದೇವೆ. ಒಂದೆರಡು ತಿಂಗಳು ಹೆಚ್ಚು ಕಮ್ಮಿಯಾಗಲಿದೆ.

ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿ. ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗೆ ಘೋಷಿಸಿದ ಅನುದಾನ ಇಲ್ಲಿಯವರೆಗೂ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ನೀಡಿಲ್ಲ, ಮಹದಾಯಿ ವಿಚಾರವಾಗಿ ಅನುಮತಿ ನೀಡಿಲ್ಲ, ಬಿಜೆಪಿ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸಿಲ್ಲ. ಇವುಗಳ ಬಗ್ಗೆ ಯಾಕೆ ಅವರು ಮಾತನಾಡುತ್ತಿಲ್ಲ?” ಎಂದು ಪ್ರಶ್ನಿಸಿದರು.

ರಾಜ್ಯ, ಸಮಾಜದ ಹಿತಕ್ಕೆ ದ್ವೇಷ ಭಾಷಣ ನಿಷೇಧ ಕಾಯ್ದೆ

ದ್ವೇಷ ಭಾಷಣ ನಿಷೇಧ ಕಾಯ್ದೆ ಬಗ್ಗೆ ಕೇಳಿದಾಗ, “ನಮ್ಮದು ನಾಗರಿಕ ಸಮಾಜ. ಇಲ್ಲಿ ದ್ವೇಷ ಮಾಡಬಾರದು. ದ್ವೇಷ, ಗಲಾಟೆ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಬಾರದು ಎಂಬ ದೃಷ್ಟಿಯಿಂದ ಕಾನೂನು ತರಲಾಗುತ್ತಿದೆ. ಇದರಿಂದ ರಾಜ್ಯ ಹಾಗೂ ಸಮಾಜಕ್ಕೆ ಒಳ್ಳೆಯದಾಗಲಿದೆ” ಎಂದರು.

ಮತಕಳ್ಳತನ ವಿರುದ್ದ ಪ್ರತಿಭಟನೆ ಯಶಸ್ವಿ; ಸಾವಿರಾರು ಕಾರ್ಯಕರ್ತರು ಭಾಗಿ:

ದೆಹಲಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು. ಮತಕಳ್ಳತನದಿಂದ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ನಮ್ಮ ಯಶಸ್ವಿ” ಎಂದರು.

“ನಾವು ಅನೇಕರಿಗೆ ಅಧಿಕಾರವನ್ನೇ ಕೊಟ್ಟಿಲ್ಲ. ಆದರೂ ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿಕೊಂಡು ದೆಹಲಿಗೆ ಬಂದು ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದಾರೆ” ಎಂದರು.

“ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸಬೇಕು ಎಂದು ಪ್ರಿಯಾಂಕ ಗಾಂಧಿ ಅವರು ಸಂದೇಶ ನೀಡಿದ್ದಾರೆ. ಪ್ರತಿಭಟನೆ ಯಶಸ್ವಿಯಾಯಿತು. ಕರ್ನಾಟಕದ ಮೂಲೆ,‌ ಮೂಲೆಯಿಂದ ಬಂದ ಕಾರ್ಯಕರ್ತರು, ಮುಖಂಡರಿಗೆ ಪಕ್ಷದ ಪರವಾಗಿ ಧನ್ಯವಾದಗಳು” ಎಂದರು.

ಹೈಕಮಾಂಡ್ ನಾಯಕರ ಭೇಟಿ, ಫೋಟೋಗಳಲ್ಲಿ ನೋಡಿದ್ದಿರಲ್ಲ

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದೀರಾ ಎಂದು ಕೇಳಿದಾಗ, “ಭೇಟಿಯಾಗಿದ್ದನ್ನು, ಕುಶಲೋಪರಿ ವಿಚಾರಿಸುವುದನ್ನು ಫೋಟೋಗಳಲ್ಲಿ ನೀವುಗಳೂ ನೋಡಿದ್ದೀರಲ್ಲ”ಎಂದರು.

ದ್ವೇಷ ಭಾಷಣ ತಡೆ ಮಸೂದೆ ಅಂಗೀಕಾರಕ್ಕೆ ಬಿಜೆಪಿ ವಿರೋಧದ ಬಗ್ಗೆ ಕೇಳಿದಾಗ, “ಕರ್ನಾಟಕದ ಅಭಿವೃದ್ಧಿ ಬಗ್ಗೆ ಏನು ಚರ್ಚೆಯಾಯಿತು ಎಂದು ಮಾಧ್ಯಮದವರು ಹೇಳುತ್ತಾರೆಯೇ?” ಎಂದು ಹೇಳಿದರು.

ಕೊಡುಗೈ ದಾನಿ, ಜನರ ಪರವಾಗಿ ಕೆಲಸ ಮಾಡಿದ ಅಜಾತಶತ್ರು

“ಶಾಮನೂರು ಶಿವಶಂಕರಪ್ಪ ಅವರು ಅಜಾತಶತ್ರು, ಮಧ್ಯ ಕರ್ನಾಟಕದ ದಾವಣಗೆರೆಗೆ ಹೊಸ ರೂಪ ನೀಡಿದವರು. ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ನಮಗೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದವರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ, ಸಮಾಜದ ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡಿ, ಕೊಡಗೈ ದಾನಿ ಎನಿಸಿಕೊಂಡಿದ್ದರು” ಎಂದರು.

“ಕೊರೋನಾ ಸಂದರ್ಭದಲ್ಲಿ ಸರ್ಕಾರಕ್ಕೆ ವ್ಯಾಕ್ಸಿನ್ ಕೊಡಲು ಆಗದೇ ಇದ್ದಾಗ ಇವರೇ ಮುಂಚಿತವಾಗಿ ಇಡೀ ದಾವಣಗೆರೆ ಜನತೆಗೆ ಉಚಿತವಾಗಿ ಲಸಿಕೆ ನೀಡಿದ್ದರು. ಇದಾದ ಮೇಲೆ ಸರ್ಕಾರ ಮುಂದಕ್ಕೆ ಬಂದಿದ್ದು. ನಾನು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೃದಯ ಶ್ರೀಮಂತಿಕೆ ಮೆಚ್ಚಿದ್ದೆ” ಎಂದರು.

“ಇಡೀ ಸರ್ಕಾರವೇ ಅವರಿಗೆ ಗೌರವ ಸಲ್ಲಿಸಿದೆ. ತುಂಬಾ ದುಃಖವಾಗುತ್ತದೆ. ಇಂತಹವರನ್ನು ಕಳೆದುಕೊಂಡಿದ್ದು ನೋವಿದೆ. ಇಂತಹವರಿಗೆ ಭಗವಂತ ಹೆಚ್ಚು ಆಯಸ್ಸು ನೀಡಬೇಕಿತ್ತು. 10-15 ದಿನ ಆಸ್ಪತ್ರೆಯಲ್ಲಿ ಕಳೆದಿದ್ದು ಬಿಟ್ಟರೆ ಇಡೀ ಬದುಕನ್ನು ಸಂಭ್ರಮದಿಂದ ಬದುಕಿದವರು. ಲಕ್ಷಾಂತರ ಜನಕ್ಕೆ ಉದ್ಯೋಗ, ಶಿಕ್ಷಣ ನೀಡಿದವರು. ತಾವು ನಂಬಿದ ಧರ್ಮವನ್ನು ಪಾಲಿಸಿ ಕೀರ್ತಿಶೇಷರಾಗಿ ಬದುಕಿದವರು ಶಾಮನೂರು ಶಿವಶಂಕರಪ್ಪ ಅವರು” ಎಂದರು.

“ಶಾಮನೂರು ಶಿವಶಂಕರಪ್ಪ ಅವರ ಅಂತಿಮ ದರ್ಶನಕ್ಕೆ ನೇರವಾಗಿ ದೆಹಲಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಯಲ್ಲಿ ದಾವಣಗೆರೆಗೆ ತೆರಳಿದ ಕಾರಣಕ್ಕೆ ಸೋಮವಾರ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಆಗಲಿಲ್ಲ” ಎಂದ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!