HomeKarnataka Newsಪೊಲೀಸರ ಯಶಸ್ಸಿನಲ್ಲೇ, ಸರ್ಕಾರದ ಯಶಸ್ಸು ಕಾಣುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಪೊಲೀಸರ ಯಶಸ್ಸಿನಲ್ಲೇ, ಸರ್ಕಾರದ ಯಶಸ್ಸು ಕಾಣುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: ಯಾವುದೇ ಸರ್ಕಾರ ಬಂದರೂ ನಿಮ್ಮ ಆತ್ಮ ವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಪೊಲೀಸ್ ಸಿಬ್ಬಂದಿ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಸಮಾಜ ಹಾಗೂ ಸರ್ಕಾರ ಪೊಲೀಸರ ಮೇಲೆ ಬಹಳ ವಿಶ್ವಾಸ ಇಟ್ಟಿರುತ್ತದೆ. ನೀವೇ ಸಮಾಜ ರಕ್ಷಕರು. ನಾವು ಅಧಿಕಾರಕ್ಕೆ ಬಂದು ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆ ನಾನು ಸ್ವಲ್ಪ ಖಾರವಾಗಿಯೇ ಮಾತನಾಡಿದ್ದೆ. ಇಂದು ನೀವೆಲ್ಲರೂ ನಿಮ್ಮ ಸಮವಸ್ತ್ರವನ್ನು ಶಿಸ್ತಿನಿಂದ ಧರಿಸಿ, ಆತ್ಮವಿಶ್ವಾಸದಲ್ಲಿ ಕೂತಿದ್ದೀರಿ. ಆದರೆ ಕಳೆದ ಸರ್ಕಾರದ ಅವಧಿಯಲ್ಲಿ ಆಯಧಪೂಜೆ ಸಂದರ್ಭ ಕೆಲವರು ವಿಜಯಪುರ ಹಾಗೂ ಉಡುಪಿಯಲ್ಲಿ ಸಮವಸ್ತ್ರ ತೆಗೆದು ಕೇಸರಿ ವಸ್ತ್ರ ಧರಿಸಿದ್ದರು.

ರಾಜಕೀಯ ಒತ್ತಡ ಅಥವಾ ಬೇರೆಯವರನ್ನು ಮೆಚ್ಚಿಸಲು ಈ ರೀತಿ ಮಾಡಿದರೆ ನಿಮ್ಮನ್ನು ನೀವು ಮಾರಿಕೊಂಡಂತೆ. ನಿಮ್ಮ ವ್ಯಕ್ತಿತ್ವ, ಇಲಾಖೆಗೆ ಇರುವ ಘನತೆ ನಾಶವಾಗುತ್ತದೆ. ನೀವುಗಳು ರಾಜಕೀಯ ಹಿಂಬಾಲಕರಾಗುತ್ತೀರಿ. ಆಗ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ನೀವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ” ಎಂದು ಕಿವಿ ಮಾತು ಹೇಳಿದರು.

ನಗರ ಪ್ರದೇಶದಲ್ಲಿ ಮನೆಗಳಲ್ಲಿ ಕೆಲಸ ಮಾಡುವವರ ನೋಂದಣಿ, ದಾಖಲೆ ಇಟ್ಟುಕೊಳ್ಳುವ ಬಗ್ಗೆ ಗಮನಹರಿಸಿ:

“ಫೋನ್ ಬಂದ ಬಳಿಕ ಸೈಬರ್ ಅಪರಾಧ ಹೆಚ್ಚಾಗಿವೆ. ಇದನ್ನು ಹತೋಟಿಗೆ ತರಲು, ಮೇಲಾಧಿಕಾರಿಗಳು ಮಾತ್ರವಲ್ಲ, ಕೆಳ ಹಂತದ ಅಧಿಕಾರಿಗಳು ತಯಾರಾಗಬೇಕು. ಬೆಂಗಳೂರು ನಗರ ಹಾಗೂ ಇತರೇ ನಗರ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲಿ ಮನೆಗೆಲಸದವರು, ಚಾಲಕರು, ಕಾವಲುಗಾರರ ನೋಂದಣಿ ಇಟ್ಟುಕೊಳ್ಳಬೇಕು. ಆಗ ಎಷ್ಟೋ ಮಟ್ಟಿಗೆ ಅಪರಾಧ ನಿಯಂತ್ರಣಕ್ಕೆ ಬರುತ್ತದೆ.

ನಮ್ಮನೆರೆ ಮನೆಯವರು ಆದಿಕೇಶವಲು ಎಂಬುವವರ ಮನೆಯಲ್ಲಿ ಕಳ್ಳತನವಾಗಿ ಎಷ್ಟೋ ದಿನಗಳಾದರೂ ಅವರಿಗೆ ಗೊತ್ತಾಗಿರಲಿಲ್ಲ. ಆಭರಣ ಮಾರಾಟವಾಗಿ ಬೇರೆಯವರು ಧರಿಸಿದ್ದನ್ನು ನೋಡಿದ ಬಳಿಕ ಮನೆಯಲ್ಲಿ ಬಂದು ಹುಡುಕುತ್ತಾರೆ. ಮೂರು ವರ್ಷಗಳ ಬಳಿಕ ಕಳ್ಳತನವಾಗಿದೆ ಎಂದು ತಿಳಿಯಿತು. ಹೀಗಾಗಿ ನೀವು ಪ್ರತಿ ಮನೆಯಲ್ಲಿ ಕೆಲಸ ಮಾಡುವವರ ದಾಖಲೆ ಇಟ್ಟುಕೊಳ್ಳಿ. ಈ ಬಗ್ಗೆ ಆಲೋಚನೆ ಮಾಡಿ” ಎಂದು ಸಲಹೆ ನೀಡಿದರು.

ಪೊಲೀಸರ ಯಶಸ್ಸಿನಲ್ಲೇ, ಸರ್ಕಾರದ ಯಶಸ್ಸು ಕಾಣುತ್ತೇವೆ

“ಪೊಲೀಸ್ ಅಧಿಕಾರಿಗಳಿಗೆ ಆತ್ಮ ವಿಶ್ವಾಸ ಮೂಡಿಸಲು ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಇವರಿಬ್ಬರೂ ನಮ್ಮ ನಾಡಿಗೆ ರಕ್ಷಣೆ ನೀಡುತ್ತಿದ್ದಾರೆ. ರಾಜ್ಯ ಪೊಲೀಸ್ ಇಲಾಖೆ ಎಂದರೆ ಬಹಳ ಗೌರವ ಪಡೆದಿದೆ. ನಾನು ಇತ್ತೀಚೆಗೆ ಹಿರಿಯ ವಕೀಲರು, ನ್ಯಾಯಾಧೀಶರನ್ನು ಭೇಟಿ ಮಾಡಿದಾಗ ನಮ್ಮ ರಾಜ್ಯದ ಅನೇಕ ಘಟನೆಗಳ ವಿಚಾರವಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿ ಅವರು ತೆಗೆದುಕೊಂಡಿರುವ ನಿರ್ಧಾರ,

ವರದಿ ಹಾಗೂ ನ್ಯಾಯಾಲಯ ಕೊಟ್ಟಿರುವ ತೀರ್ಪು ನೋಡಿ ಅವರು ಬಹಳ ಪ್ರಶಂಸೆ ವ್ಯಕ್ತಪಡಿಸಿದ್ದರು. ನಮ್ಮ ಪೊಲೀಸ್ ಅಧಿಕಾರಿಗಳು ಎಷ್ಟು ಸಮರ್ಥರಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ನಾನು ಈ ಹಿಂದೆ ಮೈಸೂರು ಪರೇಡ್ ಗೆ ಹೋಗಿದ್ದೆ. ನಿಮ್ಮ ಕಾರ್ಯಕ್ರಮದಲ್ಲಿ ಎಷ್ಟು ಸುಧಾರಣೆ ಕಂಡಿದೆ ಎಂದರೆ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳ ರೀತಿ ನಡೆಯುತ್ತಿದೆ. ಪೊಲೀಸರ ಯಶಸ್ಸಿನಲ್ಲೇ, ನಾವು ಸರ್ಕಾರದ ಯಶಸ್ಸು ಕಾಣುತ್ತೇವೆ” ಎಂದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!