ಶ್ರಮ ಪಡದ ಸಂಪತ್ತು ಶಾಶ್ವತವಲ್ಲ : ರಂಭಾಪುರಿ ಶ್ರೀಗಳು

0
ranebennur
Spread the love

ವಿಜಯಸಾಕ್ಷಿ ಸುದ್ದಿ, ರಾಣೆಬೆನ್ನೂರು : ವೀರಶೈವ ಧರ್ಮದಲ್ಲಿ ಕಾಯಕ ಧರ್ಮಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಮೂಲ. ಸಮುದಾಯದ ಅಭಿವೃದ್ಧಿಗೆ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ನಿರ್ಮಿಸಿದ ಶ್ರೀ ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರ ಉದ್ಘಾಟಿಸಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.
ಭಗವಂತನಿತ್ತ ಕೊಡುಗೆಗೆ ಸರಿ ಸಾಟಿಯಾದುದು ಇನ್ನೊಂದಿಲ್ಲ. ಆ ಭಗವಂತ ಕೊಟ್ಟಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ಮನುಷ್ಯನ ಧರ್ಮವಾಗಿದೆ. ದುಡಿಮೆಯಿಲ್ಲದ ಮತ್ತು ಶ್ರಮ ಪಡದೇ ಸಂಪತ್ತು ಬಯಸುವವರು ಬಹಳ ಜನರಿದ್ದಾರೆ. ಶ್ರಮದಿಂದ ಸಂಪಾದಿಸಿದ ಸಂಪತ್ತು ಸುಖ, ಶಾಂತಿ ತಂದುಕೊಡಬಲ್ಲದು. ಶ್ರಮ ಪಡದ ಸಂಪತ್ತು ಶಾಶ್ವತವಲ್ಲ. ಆದ್ದರಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು `ವೃತ್ತಿಶ್ಚೈತನ್ಯ ರೂಪಿಣಿ’ ಎಂದು ಸಾರಿದ್ದಾರೆ. ಮನುಷ್ಯನಲ್ಲಿ ಅತಿಯಾದ ವೈಚಾರಿಕತೆ ಬೆಳೆದು ಧರ್ಮದಲ್ಲಿ ಶ್ರದ್ಧೆ, ಹಿರಿಯರಲ್ಲಿ ಗೌರವ ಕೊಡದ ಜನರು ಹೆಚ್ಚುತ್ತಿದ್ದಾರೆ.
ಜೀವನೋತ್ಸಾಹಕ್ಕೆ ಯೋಗ್ಯ ಮಾರ್ಗದರ್ಶನ ಮತ್ತು ಸಂಸ್ಕಾರ ಕೊಟ್ಟರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಕಾಯಕ ಧರ್ಮ ಅನುಸರಿಸಿ ಭೌತಿಕ ಮಾರ್ಗದಲ್ಲಿ ನಡೆಯುವ ಜನ ಸಮುದಾಯಕ್ಕೆ ದಿಕ್ಸೂಚಿಯಾಗಿದ್ದಾರೆ. ಅವರ ಸರಳತೆ ಮತ್ತು ಮುಗ್ಧ ಮನೋಭಾವದಿಂದಾಗಿ ಭಕ್ತ ಸಂಕುಲದ ಸಂತೋಷಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿ, ಶ್ರೀಗಳವರಿಗೆ ಶ್ರೀ ಪೀಠದಿಂದ ಫಲ-ಪುಷ್ಪ ಸ್ಮರಣಿಕೆ ನೀಡಿ ಶುಭ ಹಾರೈಸಿದರು.
ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧ ಶಿವಾಚಾರ್ಯರು, ನಾಗವಂದ ಹೊರಗಿನಮಠದ ಶಿವಾನಂದ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಶ್ರೀ ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಪೀಠಾರೋಹಣದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ, ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರ ಲೋಕಾರ್ಪಣೆ ಮತ್ತು ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ ನೆರವೇರಿದವು. ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳವರ ಅಶೀರ್ವಾದ ಪಡೆದರು. ಹುಬ್ಬಳ್ಳಿಯ ಮಹಿಳಾ ಮಂಡಳದ ಸದಸ್ಯರಿಂದ ಭಕ್ತಿ ಗೀತೆ ಜರುಗಿತು. ಮಾಸೂರಿನ ಗುರುಪ್ರಸಾದ್ ಹಿರೇಮಠ ನಿರೂಪಿಸಿದರು.
ನೇತೃತ್ವ ವಹಿಸಿದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಿರೇಮಠದ ಇತಿಹಾಸದಲ್ಲಿ ಇಂದು ಅವಿಸ್ಮರಣೀಯವಾದ ಪವಿತ್ರ ದಿನವಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ಲಿಂಗದಹಳ್ಳಿ ಹಿರೇಮಠದ ಅಭಿವೃದ್ಧಿ ಮಾಡಿರುವೆ. ಈ ಭಾಗದ ಭಕ್ತರಿಗೆ ಸಂಸ್ಕಾರ, ಸದ್ವಿಚಾರಗಳನ್ನು ಮನೆ ಮನಕ್ಕೆ ಮುಟ್ಟಿಸಿದ ಸಂತೃಪ್ತ ಮನೋಭಾವ ನಮ್ಮದಾಗಿದೆ ಎಂದರು.

Spread the love
Advertisement

LEAVE A REPLY

Please enter your comment!
Please enter your name here