ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪದವಿ ಹಂತದ ಎಲ್ಲಾ ವಿದ್ಯಾರ್ಥಿಗಳು ಸತತ ಪರಿಶ್ರಮ, ನಿಷ್ಠೆಯ ಕಲಿಕೆಯಿಂದ ಸಾಧನೆ ಮಾಡಿ, ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ, ತಮ್ಮ ಅಮೂಲ್ಯವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಎಸ್.ಎಲ್. ಗುಳೇದಗುಡ್ಡ ಹೇಳಿದರು.
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಬಿಎ, ಬಿಕಾಂ, ಬಿಎಸ್‌ಸಿ, ಬಿಸಿಎ ಪದವಿಗಳ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳು ಸುಮ್ಮನೆ ಕೂರುವ ಕಾಲವಲ್ಲ. ಸ್ಪರ್ಧೆ ಇದ್ದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಅದಕ್ಕಾಗಿ ಹೆಚ್ಚಿನ ನೈಪುಣ್ಯತೆ ಬೆಳೆಸಿಕೊಳ್ಳಿ. ವಿಶ್ವದಲ್ಲೇ ಭಾರತ ಅತ್ಯಧಿಕ ಯುವ ಸಮೂಹವನ್ನು ಹೊಂದಿದ್ದು, ಅದು ಸಂಪನ್ಮೂಲವಾಗಿ ಹೊರಹೊಮ್ಮಲು ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ಬೆಳೆಯಬೇಕು ಎಂದರು.
ಹಿರಿಯ ಪ್ರಾಧ್ಯಾಪಕ ಎಸ್.ಎಸ್. ಸೂಡಿ ಮಾತನಾಡಿ, ನಮ್ಮ ಸರ್ಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡಲು ಬಂದ ವಿದ್ಯಾರ್ಥಿಗಳು ಉತ್ತಮ ಜ್ಞಾನದ ಜೊತೆ ಕೌಶಲಾಭಿವೃದ್ಧಿಗೆ ಮುಂದಾಗಬೇಕು. ವಿವಿಧ ಕ್ಷೇತ್ರದಲ್ಲಿ ತಮ್ಮಲ್ಲಿರುವ ಪ್ರತಿಭೆ ಹೊರಬರಲು ಉಪನ್ಯಾಸಕರ ಮಾರ್ಗದರ್ಶನದಲ್ಲಿ ತಾವೇ ಅವಕಾಶಗಳನ್ನು ಹುಡುಕಿಕೊಳ್ಳಬೇಕು. ಹೀಗಾದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಪ್ರಾಧ್ಯಾಪಕರಾದ ಜ್ಯೋತಿ ಬೋಳಣ್ಣವರ, ನಸರೀನ್ ಬಾನು ಜಮಾದರ, ಕೆ.ಆರ್. ಪಾಟೀಲ, ಅಂಜನಮೂರ್ತಿ, ಶಿವಮೂರ್ತಿ ಕರೇರ, ಅನಿಲಕುಮಾರ, ವಿ.ಸಿ.. ಇಲ್ಲೂರ, ಕೆ.ಎನ್. ಕಟ್ಟಿಮನಿ, ನಾಗರಾಜ ಹೊನ್ನೂರ, ಬಸವರಾಜ ಕಂಬಳಿ, ಚಂದ್ರು ಸಂಶಿ, ವಿ.ಕೆ. ಸಂಗನಾಳ, ಬಸವರಾಜ ಮಡಿವಾಳರ, ಕಿರಣ ರಂಜನಗಿ, ಶಂಕರ ನರಗುಂದ, ಕಿನ್ನಾಳ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಸಿದ್ದು ನವಲಗುಂದ ಇದ್ದರು.