ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಭಾತೃತ್ವದ ಕೊಂಡಿ ಬೆಸೆಯುವ ಹಬ್ಬಗಳಲ್ಲಿ ರಂಗು ರಂಗಿನ ಹೋಳಿ ಹಬ್ಬವೂ ಒಂದು. ಗಂಡು ಮಕ್ಕಳ ಹಬ್ಬವೆಂದು ಗುರುತಿಸುವ ಈ ಹಬ್ಬ ಬಂತೆಂದರೆ ಸಾಕು, ಮಕ್ಕಳಿಗೆ, ಯುವಕರಿಗೆ ಎಲ್ಲಿಲ್ಲದ ಖುಷಿ. ಶಿವರಾತ್ರಿಯ ಮಾರನೇ ದಿನದಿಂದ ಆರಂಭವಾಗುವ ಈ ಹಬ್ಬವು ಹುಣ್ಣಿಮೆವರೆಗೂ 15 ದಿನಗಳ ಕಾಲ ನಡೆಯುತ್ತದೆ.
ಈ ಹಬ್ಬದ ಪ್ರಯುಕ್ತ ಮಕ್ಕಳು, ಪಡ್ಡೆ ಹುಡುಗರು ಬೆಳಗು ಮುಂಜಾನೆಯಿಂದ ಹಿಡಿದು ರಾತ್ರಿಯವರೆಗೂ ಊರಿನ ಓಣಿ-ಓಣಿಗಳ ತುಂಬಾ ತಿರುಗಾಡಿ ಹೊಯ್ಕೊಂಡ ಬಡ್ಕೊಂಡ ಬಗೆ ಬಗೆಯ ಶೈಲಿಯಲ್ಲಿ ತಮಟೆ ಬಾರಿಸುತ್ತಾ `ಕಾಮಣ್ಣನ ಮಕ್ಕಳು.. ಕಳ್ಳ ಸುಳ್ಳ ಮಕ್ಕಳು, ಏನೇನು ಕದ್ದರು ಕಟಿಗಿ ಕುಳ್ಳು ಕದ್ದರು, ಯಾತಕ್ಕೆ ಕದ್ದರು, ಕಾಮಣ್ಣನ ಸುಡಾಕ ಕದ್ದರು’ ಎಂದು ಹಾಡುತ್ತಾ ಜನರನ್ನು ಆಕರ್ಷಿಸುತ್ತಿದ್ದಾರೆ.
ಬಣ್ಣದೋಕುಳಿ ಆಡುವ ಹಬ್ಬಕ್ಕೆ ಇನ್ನು ಕೆಲವು ದಿನಗಳು ಬಾಕಿಯಿದ್ದು, ನರೇಗಲ್ಲ ಪಟ್ಟಣ ಅಷ್ಟೇ ಅಲ್ಲದೆ ಕೋಡಿಕೊಪ್ಪ, ಜಕ್ಕಲಿ, ಬೂದಿಹಾಳ, ಮಾರನಬಸರಿ, ನಿಡಗುಂದಿ, ಹಾಲಕೆರೆ, ಅಬ್ಬಿಗೇರಿ, ಕೋಟುಮಚಗಿ, ನಿಡಗುಂದಿಕೊಪ್ಪ, ನಾಗರಾಳ, ಹೊಸಳ್ಳಿ, ಗುಜಮಾಗಡಿ, ಡ.ಸ. ಹಡಗಲಿ, ತೋಟಗಂಟಿ, ಕೊಚಲಾಪೂರ, ಮಲ್ಲಾಪೂರ, ದ್ಯಾಂಪೂರ, ನಾರಾಯಣಪೂರ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಈಗಾಗಲೇ ತಮಟೆ ನಾದ ಪ್ರತಿಧ್ವನಿಸುತ್ತಿದೆ. ಮಧ್ಯಾಹ್ನ ಶಾಲೆ ಬಿಟ್ಟ ನಂತರ ಮಕ್ಕಳ ಕೈ-ಬಾಯಿಗೆ ಬಿಡುವಿಲ್ಲದ ಕೆಲಸ!
ಮಕ್ಕಳು ಬಾಯಿ ಬಾಯಿ ಬಡಿದುಕೊಳ್ಳುತ್ತಾ ಕೇಕೆ, ಸಿಳ್ಳೆ ಹಾಕುತ್ತಾ ಕಿವಿಗಡಚಿಕ್ಕುವ ತಮಟೆ ನಾದಕ್ಕೆ ಕುಣಿದು ಕುಪ್ಪಳಿಸುತ್ತಿರುವ ಹಾಗೂ ಲಬೋ ಲಬೋ ಹೊಯ್ಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.
ಕೆಲ ಯುವಕರು ಸಂಭ್ರಮದಿಂದ ತಮಟೆ, ಹಲಗೆ ಮೂಲಕ ಬಗೆ ಬಗೆಯ ಸ್ವರಗಳನ್ನು ನುಡಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಗುಂಗು ಈಗ ಜನರ ಕರ್ಣಪಟಲದಲ್ಲಿ ರಿಂಗಣಿಸುತ್ತಿದೆ. ಹದಿ ಹರೆಯದ ಹುಡುಗರಂತೂ ಲಯಬದ್ಧವಾಗಿ ತಮಟೆ ನುಡಿಸಿದರೆ, ಪುಟಾಣಿ ಮಕ್ಕಳು ಹತ್ತಾರು ಬಗೆಯಲ್ಲಿ ಬಾರಿಸಿ ಖುಷಿ ಪಡುತ್ತಿದ್ದಾರೆ. ಕಳೆದೊಂದು ವಾರದಿಂದ ಪಟ್ಟಣ, ಗ್ರಾಮೀಣ ಎಂಬ ಭೇದವಿಲ್ಲದೇ ಎಲ್ಲೆಲ್ಲೂ ಯುವಕರ, ಮಕ್ಕಳ ಕೈಯಲ್ಲಿ ಪ್ಲಾಸ್ಟಿಕ್ ತಮಟೆ ಸದ್ದು ಮಾರ್ದನಿಸುತ್ತಿದೆ. ಚಿಣ್ಣರ ಉತ್ಸಾಹವಂತೂ ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದೆ. ಊಟ ತಿಂಡಿ ಮರೆತು ತಮಟೆ ಬಾರಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ಒಂದೆಡೆ ಗುಂಪು ಗುಂಪಾಗಿ ಯುವಕರು ಕಟ್ಟಿಗೆ, ಕುಳ್ಳು ಕದಿಯುವ ಕೆಲಸದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಬೀದಿ ಬೀದಿಗಳಲ್ಲಿ ನಾಚಿಕೊಳ್ಳದಂತಹ ಗೆಳೆಯರನ್ನು ಸತ್ತ ಹೆಣದಂತೆ ವೇಷ ತೊಡಿಸಿ, ಚಟ್ಟದ ಮೇಲೆ ಕೂಡ್ರಿಸಿ ಮೆರವಣಿಯೊಂದಿಗೆ ಮೋಜಿಗಾಗಿ ಹಾಡು ಹಾಡಿಕೊಂಡು ಅಳುವ ದೃಶ್ಯ ನೆನಪಿಸಿ ಹಾಸ್ಯ, ವಿನೋದ, ಅಣುಕು ಪ್ರದರ್ಶನ ಮಾಡುವುದು, ನಗೆಯ ಹೊನಲು ಹರಿಸುವುದು ಸೇರಿದಂತೆ ನಿತ್ಯ ಒಂದಿಲ್ಲೊಂದು ಬಗೆಯ ಮನರಂಜನೆ ಆಟದೊಂದಿಗೆ ಜನರನ್ನು ರಂಜಿಸಿ ಹಬ್ಬದ ರಂಗು ಹೆಚ್ಚಿಸುವಂತೆ ಮಾಡುತ್ತಿದ್ದಾರೆ.



