ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವೀಲಿಂಗ್ ಪುಂಡರ ಹಾವಳಿ ಶುರುವಾಗಿದೆ.

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಚಿಕ್ಕಬಿದರಕಲ್ಲು ಫ್ಲೈಓವರ್ ಮೇಲೆ ಯುವಕರ ಗುಂಪೊಂದು ನಂಬರ್ ಪ್ಲೇಟ್ ಇಲ್ಲದ ಬೈಕ್ ಹಾಗೂ ಸ್ಕೂಟರ್ಗಳಲ್ಲಿ ವೀಲಿಂಗ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ವೀಕೆಂಡ್ಗಳಲ್ಲಿ ರಾತ್ರಿ ವೇಳೆ ಈ ಗುಂಪು ವೀಲಿಂಗ್ ಮಾಡುತ್ತಿದೆ ಎನ್ನಲಾಗಿದೆ. ಸುಮಾರು 20ಕ್ಕೂ ಹೆಚ್ಚು ಬೈಕ್, ಸ್ಕೂಟರ್ಗಳು ಹಾಗೂ ಒಂದು ಕಾರನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ವೀಲಿಂಗ್ ಮತ್ತು ಬೈಕ್ ರೇಸ್ ನಡೆಸಿದ್ದಾರೆ.
ಪಾರ್ಲೆ-ಜಿ ಟೋಲ್ ದಾಟಿದ ಬಳಿಕ ಬರುವ ಚಿಕ್ಕಬಿದರಕಲ್ಲು ಫ್ಲೈಓವರ್ ಮೇಲೆ ಈ ಘಟನೆ ನಡೆದಿದೆ. ಕೆಲವು ಬೈಕ್ಗಳು ಹಾಗೂ ಸ್ಕೂಟರ್ಗಳಿಗೆ ನಂಬರ್ ಪ್ಲೇಟ್ ಇರಲಿಲ್ಲ. ಅಲ್ಲದೆ, ಸೈಲೆನ್ಸರ್ಗಳನ್ನು ಮಾರ್ಪಡಿಸಿರುವ ವಾಹನಗಳನ್ನೂ ವೀಲಿಂಗ್ಗೆ ಬಳಸಲಾಗಿದೆ.
21 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲೇ ಯುವಕರು ಈ ರೀತಿ ವೀಲಿಂಗ್ ಮಾಡಿದ್ದಾರೆ. ನೂರಾರು ವಾಹನಗಳು ಸಂಚರಿಸುವ ರಸ್ತೆಯಲ್ಲಿ ಏಕಮುಖ ಸಂಚಾರದ ನಿಯಮ ಉಲ್ಲಂಘಿಸಿ ಎರಡೂ ದಿಕ್ಕುಗಳಲ್ಲಿ ವೀಲಿಂಗ್ ಮಾಡಿರುವ ದೃಶ್ಯಗಳು ಕಂಡುಬಂದಿವೆ.
ಯುವಕರ ಈ ಕೃತ್ಯಗಳು ಇತರ ವಾಹನ ಸವಾರರ ಸುರಕ್ಷತೆಗೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ. ವೀಲಿಂಗ್ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿದ್ದು, ಇಂತಹವರ ವಿರುದ್ಧ ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.










