ಇತ್ತೀಚಿನ ದಿನಗಳಲ್ಲಿ ಬಹುತೇಕರು ಹಣಕಾಸಿನ ವಹಿವಾಟುಗಳಿಗಾಗಿ ಯುಪಿಐ, ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಪಾವತಿ ವಿಧಾನಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.

ಆದರೆ ದೊಡ್ಡ ಮೊತ್ತದ ವಹಿವಾಟುಗಳಿಗೆ ಇಂದಿಗೂ ಹಲವರು ಚೆಕ್ಗಳನ್ನೇ ಅವಲಂಬಿಸಿದ್ದಾರೆ. ನೀವು ಕೂಡ ಎಂದಾದರೂ ಚೆಕ್ ಬರೆದಿದ್ದರೆ, ಅದರಲ್ಲಿ ಮೊತ್ತವನ್ನು ಅಕ್ಷರಗಳಲ್ಲಿ ನಮೂದಿಸಿದ ಬಳಿಕ ಕೊನೆಯಲ್ಲಿ ‘Only’ ಎಂದು ಬರೆಯುವುದನ್ನು ಗಮನಿಸಿರಬಹುದು. ಆದರೆ ಈ ಪದವನ್ನು ಯಾಕೆ ಬರೆಯುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಈ ಒಂದು ಪದದ ಬಳಕೆಯ ಹಿಂದೆ ಹಣಕಾಸಿನ ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಕಾರಣವಿದೆ.
ಚೆಕ್ನಲ್ಲಿ ‘Only’ ಎಂದು ಬರೆಯುವುದು ಯಾಕೆ?
1. ಹಣಕಾಸಿನ ವಂಚನೆ ತಡೆಯಲು: ಚೆಕ್ನಲ್ಲಿ ಮೊತ್ತವನ್ನು ಅಕ್ಷರಗಳಲ್ಲಿ ಬರೆದ ಬಳಿಕ ‘Only’ ಎಂದು ನಮೂದಿಸುವುದರಿಂದ ಅದರ ಮುಂದೆ ಹೆಚ್ಚುವರಿ ಪದಗಳನ್ನು ಸೇರಿಸಿ ಮೊತ್ತವನ್ನು ಬದಲಾಯಿಸುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಇದು ಚೆಕ್ನ ಸುರಕ್ಷತೆಗೆ ಸಹಕಾರಿಯಾಗಿದೆ.
2. ಮೊತ್ತದ ಬಗ್ಗೆ ಗೊಂದಲ ನಿವಾರಣೆ: ಚೆಕ್ನಲ್ಲಿ ನಮೂದಿಸಿರುವ ಮೊತ್ತವನ್ನು ಸ್ಪಷ್ಟಪಡಿಸಲು ಈ ಪದ ಸಹಾಯ ಮಾಡುತ್ತದೆ. ಅಂಕಿಗಳಲ್ಲಿ ಮತ್ತು ಅಕ್ಷರಗಳಲ್ಲಿ ಬರೆದಿರುವ ಮೊತ್ತದ ನಡುವೆ ಹೊಂದಾಣಿಕೆ ಇದೆಯೇ ಎಂಬುದನ್ನು ಪರಿಶೀಲಿಸಲು ಬ್ಯಾಂಕ್ ಸಿಬ್ಬಂದಿಗೂ ಅನುಕೂಲವಾಗುತ್ತದೆ.
3. ಹೆಚ್ಚುವರಿ ಪದಗಳ ಸೇರ್ಪಡೆಗೆ ಕಡಿವಾಣ: ಉದಾಹರಣೆಗೆ, ಚೆಕ್ನಲ್ಲಿ ‘Ten Thousand’ ಎಂದು ಬರೆದ ಬಳಿಕ ‘Only’ ಎಂದು ಬರೆಯದಿದ್ದರೆ, ದುರುದ್ದೇಶ ಹೊಂದಿರುವವರು ಅದರ ಮುಂದೆ ಅಥವಾ ನಂತರ ಹೆಚ್ಚುವರಿ ಪದಗಳನ್ನು ಸೇರಿಸಲು ಪ್ರಯತ್ನಿಸಬಹುದು. ಹೀಗಾಗಿ ‘Only’ ಪದವು ಇಂತಹ ತಿದ್ದುಪಡಿಗಳ ಸಾಧ್ಯತೆಯನ್ನು ತಡೆಯಲು ನೆರವಾಗುತ್ತದೆ.
‘Only’ ಬರೆಯುವುದು ಕಡ್ಡಾಯವೇ?
ಚೆಕ್ನಲ್ಲಿ ಮೊತ್ತದ ಕೊನೆಯಲ್ಲಿ ‘Only’ ಎಂದು ಬರೆಯಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಆದರೂ ಯಾವುದೇ ರೀತಿಯ ತಿದ್ದುಪಡಿ ಅಥವಾ ವಂಚನೆಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಆದ್ದರಿಂದ ಚೆಕ್ ಬರೆಯುವಾಗ ಮೊತ್ತವನ್ನು ಅಕ್ಷರಗಳಲ್ಲಿ ಸ್ಪಷ್ಟವಾಗಿ ನಮೂದಿಸಿ, ಕೊನೆಯಲ್ಲಿ ‘Only’ ಎಂದು ಬರೆಯುವ ಅಭ್ಯಾಸ ರೂಢಿಸಿಕೊಳ್ಳಿ.
ಚಿಕ್ಕದಾದ ಈ ಒಂದು ಪದ ನಿಮ್ಮ ಚೆಕ್ ವಹಿವಾಟಿನಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ.









