ಅಹಮದಾಬಾದ್: ಊಟದ ವಿಚಾರಕ್ಕೆ ದಂಪತಿ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.

ನಿವೃತ್ತ ಮಾಜಿ ಸೈನಿಕನನ್ನು ಪತ್ನಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ.
ಮೃತನನ್ನು ದಿಲೀಪ್ ಖರಾಡೆ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ಬಳಿಕ ಅಹಮದಾಬಾದ್ನ ನರೋಡಾ ಪ್ರದೇಶದಲ್ಲಿ ಪತ್ನಿ ನಿರ್ಮಲಾ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಜೀವನೋಪಾಯಕ್ಕಾಗಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ದಂಪತಿ ನಡುವೆ ಬಹಳ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಹೀಗಿರುವಾಗ ನಿನ್ನೆ ರಾತ್ರಿ ಊಟದ ಸಮಯದಲ್ಲಿ ದಿಲೀಪ್, ಪತ್ನಿ ನಿರ್ಮಲಾಗೆ ಇಂದು ಯಾವ ತರಕಾರಿ ಪಲ್ಯ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.
ಇದರಿಂದ ಆಕ್ರೋಶಗೊಂಡ ನಿರ್ಮಲಾ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಪತಿಯ ಎದೆಗೆ ಇರಿದಿದ್ದಾಳೆ. ಬಳಿಕ ತಾನೇ ಪತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಚಾಕು ಹೃದಯದ ಮೇಲ್ಭಾಗಕ್ಕೆ ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್, ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತ ದಿಲೀಪ್ ಅವರ ತಂದೆ ನೀಡಿದ ದೂರಿನ ಮೇರೆಗೆ ನರೋಡಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.










