ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರ ಬ್ಯಾರಕ್ ಬದಲಾವಣೆ ಅರ್ಜಿ ಕುರಿತು ಇಂದು ನ್ಯಾಯಾಲಯ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಸಂಬಂಧ ವಾದ-ಪ್ರತಿವಾದ ಪೂರ್ಣಗೊಂಡಿದ್ದು, ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದಾರೆ.
ಪವಿತ್ರಾ ಗೌಡ ಅವರು ಮಹಿಳಾ ಬ್ಯಾರಕ್ ಬದಲಾವಣೆ ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಜೈಲಿನ ಮಹಿಳಾ ಬ್ಯಾರಕ್ಗಳನ್ನು ಪರಿಶೀಲಿಸಲು ನ್ಯಾಯಾಧೀಶರೇ ಖುದ್ದಾಗಿ ಜೈಲಿಗೆ ಭೇಟಿ ನೀಡಬೇಕು ಎಂದು ಅವರ ಪರ ವಕೀಲರು ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆಯೂ ನ್ಯಾಯಾಲಯ ಇಂದು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಬ್ಯಾರಕ್ನಲ್ಲಿ ತೊಂದರೆ ನೀಡುತ್ತಿರುವ ಆರೋಪ:
ಪವಿತ್ರಾ ಗೌಡ ಅವರು ಅಕ್ಟೋಬರ್ 13ರಂದು ಬ್ಯಾರಕ್ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಪದೇಪದೇ ಮನವಿ ಮಾಡಿದರೂ ಜೈಲಾಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ಅವರ ಆರೋಪವಾಗಿದೆ. ಬ್ಯಾರಕ್ನಲ್ಲಿರುವ ವಿದೇಶಿ ಕೈದಿಗಳು ಮಧ್ಯರಾತ್ರಿಯವರೆಗೂ ನಿದ್ದೆ ಮಾಡಲು ಬಿಡುತ್ತಿಲ್ಲ. ತಮ್ಮ ಬಟ್ಟೆ ಸೇರಿದಂತೆ ಇತರ ವಸ್ತುಗಳನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಗಲಾಟೆ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಆರೋಗ್ಯದಲ್ಲಿ ಏರುಪೇರಾಗಿದೆ ಎಂದ ಪವಿತ್ರಾ ಗೌಡ:
ಸದ್ಯ ಪವಿತ್ರಾ ಗೌಡ ಇರುವ ಬ್ಯಾರಕ್ನಲ್ಲಿ ಸುಮಾರು 30 ಮಹಿಳಾ ಕೈದಿಗಳಿದ್ದು, ಅವರಲ್ಲಿ ನಾಲ್ಕರಿಂದ ಐದು ಮಂದಿ ವಿದೇಶಿ ಪ್ರಜೆಗಳಿದ್ದಾರೆ ಎನ್ನಲಾಗಿದೆ. ಸಹಕೈದಿಗಳ ವರ್ತನೆಯಿಂದ ತೊಂದರೆಯಾಗುತ್ತಿದ್ದು, ತಮ್ಮ ಆರೋಗ್ಯದಲ್ಲೂ ಏರುಪೇರಾಗಿದೆ ಎಂದು ಪವಿತ್ರಾ ಗೌಡ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಸಂಬಂಧ ವೈದ್ಯಕೀಯ ವರದಿಯನ್ನೂ ಸಲ್ಲಿಸಿದ್ದಾರೆ.
ಹಿಂದಿನ ಆದೇಶ ಪಾಲಿಸದ ಜೈಲಾಧಿಕಾರಿಗಳು?
ಈ ಹಿಂದೆ ಪವಿತ್ರಾ ಗೌಡ ಅವರ ಬ್ಯಾರಕ್ ಬದಲಾವಣೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು ಎನ್ನಲಾಗಿದೆ. ಆದರೆ, ಜೈಲಾಧಿಕಾರಿಗಳು ಬ್ಯಾರಕ್ ಬದಲಾವಣೆ ಮಾಡದ ಹಿನ್ನೆಲೆಯಲ್ಲಿ ಕಾರಣವೇನು ಎಂದು ನ್ಯಾಯಾಲಯ ವರದಿ ಕೇಳಿತ್ತು. ಇದೀಗ ಜೈಲಾಧಿಕಾರಿಗಳು ಬ್ಯಾರಕ್ ಬದಲಾವಣೆ ವಿಚಾರವಾಗಿ ವರದಿ ಸಲ್ಲಿಸಿದ್ದಾರೆ.
ಹೀಗಾಗಿ, ಇಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆ ಮಹತ್ವ ಪಡೆದುಕೊಂಡಿದೆ. ಪವಿತ್ರಾ ಗೌಡ ಅವರ ಬ್ಯಾರಕ್ ಬದಲಾವಣೆಗೆ ಅನುಮತಿ ಸಿಗುತ್ತದೆಯೇ? ಮಹಿಳಾ ಬ್ಯಾರಕ್ ಪರಿಶೀಲನೆಗೆ ನ್ಯಾಯಾಧೀಶರು ಜೈಲಿಗೆ ಭೇಟಿ ನೀಡುತ್ತಾರೆಯೇ? ಎಂಬುದಕ್ಕೆ ನ್ಯಾಯಾಲಯದ ಆದೇಶದ ಬಳಿಕ ಸ್ಪಷ್ಟನೆ ಸಿಗಲಿದೆ.










