ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಇಂದು ಆರಂಭಗೊಂಡಿದೆ, ಡಿಸೆಂಬರ್ 19ರವರೆಗೆ ನಡೆಯಲಿದೆ. ಈ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಬಿಹಾರ ಚುನಾವಣೆಯಲ್ಲಿನ ಸೋಲನ್ನು ಕೆಲವು ಪಕ್ಷಗಳಿಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ, ಚಳಿಗಾಲದ ಅಧಿವೇಶನ ಸೋಲಿನ ಹತಾಶೆಯ ಅಭಿವ್ಯಕ್ತಿ ತಾಣವಾಗಿ ಬದಲಾಗಬಾರದು ಎಂದರು.
ಗೆಲುವಿನ ಮೇಲಿನ ದುರಹಂಕಾರದ ಅಭಿವ್ಯಕ್ತಿಯಾಗಿ ಬದಲಾಗಬಾರದು.ನಾವು ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದರು. ವಿರೋಧ ಪಕ್ಷಗಳಿಗೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲು ಸಿದ್ಧನಿದ್ದೇನೆ, ಆದರೆ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಾರದು ಎಂದು ಹೇಳಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಂದು ಪ್ರಾರಂಭವಾಗಿ ಡಿಸೆಂಬರ್ 19 ರವರೆಗೆ ನಡೆಯಲಿದೆ. ಅಧಿವೇಶನವು ಕಡಿಮೆ ಸಮಯದ್ದಾಗಿದೆ ಎಂದು ವಿರೋಧ ಪಕ್ಷಗಳು ಹೇಳಿದ್ದು, ಹಲವಾರು ಪ್ರಮುಖ ವಿಷಯಗಳ ಕುರಿತು ವಿವರವಾದ ಮತ್ತು ಆಳವಾದ ಚರ್ಚೆಗಳನ್ನು ನಡೆಸಬೇಕೆಂದು ಒತ್ತಾಯಿಸಿವೆ.
ಚಳಿಗಾಲದ ಅಧಿವೇಶನವು ಸಾಮಾನ್ಯವಾಗಿ ಸುಮಾರು 20 ಸೆಷನ್ಗಳನ್ನು ಒಳಗೊಂಡಿರುತ್ತದೆ. ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳು ಈ ವಿಷಯವನ್ನು ಎತ್ತಿದ್ದರು. ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಈ ಚಳಿಗಾಲದ ಅಧಿವೇಶನ ಕೇವಲ 15 ಸೆಷನ್ಗಳನ್ನು ಮಾತ್ರ ಹೊಂದಿರಲಿದೆ.



