ಶಿವಮೊಗ್ಗ: ಭದ್ರಾವತಿ ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ವಕೀಲ ಭರತ್ ಬಿ.ಎಸ್ ವಿರುದ್ಧ ಅತ್ಯಾಚಾರ ಹಾಗೂ ಬ್ಲ್ಯಾಕ್‌ಮೇಲ್ ಆರೋಪ ಕೇಳಿಬಂದಿದ್ದು, ಈ ಸಂಬಂಧ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿಯ ಪ್ರಕಾರ, ಆರೋಪಿ 23 ವರ್ಷದ ಮಹಿಳೆಯ ಪತಿಯ ಸ್ನೇಹಿತನೆಂದು ಪರಿಚಯಿಸಿಕೊಂಡು ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಬೆಳೆಸಿಕೊಂಡಿದ್ದಾನೆ. ನಂತರ ದಿನಸಿ ಅಂಗಡಿಗೆ ಪದೇ ಪದೇ ಭೇಟಿ ನೀಡಿ ಮಹಿಳೆಗೆ ದೈಹಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಏಪ್ರಿಲ್ 11ರಂದು ಮಹಿಳೆಯ ಪತಿ ಮನೆಯಲ್ಲಿ ಇಲ್ಲದ ವೇಳೆ, ಆರೋಪಿ ಮನೆಗೆ ಬಂದಿದ್ದಾಗ ಒಂಟಿಯಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ಹೇಳಿದರೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಏಪ್ರಿಲ್ 25ರಂದು ಮತ್ತೆ ಅಂಗಡಿಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಕೂಡ ಆರೋಪಿಸಲಾಗಿದೆ. ಈ ನಡುವೆ ಪತಿ ಮೊಬೈಲ್ ಪರಿಶೀಲನೆ ವೇಳೆ ಅನುಮಾನಾಸ್ಪದ ಚಾಟ್‌ಗಳು ಕಂಡುಬಂದಿದ್ದು, ನಂತರ ಮಹಿಳೆ ಸಂಪೂರ್ಣ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಭರತ್ ಬಿ.ಎಸ್ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.



