ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸ್ತ್ರೀ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯಿಂದ ಸಮಾಜದ ಹಾಗೂ ಕುಟುಂಬದ ಏಳ್ಗೆ ಸಾಧ್ಯ ಎಂದು ಗೀತಾ ಜಾಧವ ಹೇಳಿದರು.
ಅವರು ಪಟ್ಟಣದ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಪತಂಜಲಿ ಯೋಗ ಸಂಘಟನೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾಜದ ಎಲ್ಲಾ ಮಹಿಳೆಯರ ಪರವಾಗಿ ಸೇವೆ ಮಾಡಿದ್ದಕ್ಕೆ ಪ್ರತಿಫಲವಾಗಿ ನನಗೆ ರಾಷ್ಟ ಮಟ್ಟದ ಅಹಲ್ಯಾ ಬಾಯಿ ಹೋಳ್ಕರ್ ಪ್ರಶಸ್ತಿ ದೊರೆತಿದೆ. ಮಹಿಳೆಯರು ಆಧುನಿಕ ಯುಗದಲ್ಲಿ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದು, ಮಹಿಳೆಯರು ಹಿಂಜರಿಕೆಯನ್ನು ತೊಡೆದು ಹಾಕಿ ಸಾಧನೆ ಮಾಡಿದರೆ ಸಮಾಜದ ಉದ್ಧಾರವಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕಿ ಜಯಶ್ರೀ ಲಕ್ಕುಂಡಿ, ಅಕ್ಕಮ್ಮಾ ನೀಲಗುಂದ, ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ಯೋಗ ಶಿಕ್ಷಕ ಪ್ರಕಾಶ ಮುದ್ದಿನ, ಈರಣ್ಣಾ ದೊಟಿಕಲ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮಹಿಳೆಯರಿದ್ದರು.