ಹಾಸನ:- ಹಾಸನದ ಅರಳೇಪೇಟೆಯಲ್ಲಿ ಬಣ್ಣಬಣ್ಣದ ಮಾತಾಡಿ ಹಲವಾರು ಜನರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ಮಹಿಳೆಯನ್ನು ಜನ ಅಟ್ಟಾಡಿಸಿ ಹೊಡೆದ ಘಟನೆ ಜರುಗಿದೆ.
ಹೇಮಾವತಿ ಎಂಬಾಕೆ ಟೈಲರ್ ಶಾಪ್ ನಡೆಸುತ್ತಿದ್ದರು. ಇವರು ಹಲವರ ಬಳಿ ಚಿಟ್ಸ್‍ನಲ್ಲಿ 1 ಕೋಟಿ ರೂ. ಚೀಟಿ ಹಾಕಿದ್ದೇನೆ ಎಂದು ಸ್ಲಿಪ್ ತೋರಿಸಿ ಹಣ ಪಡೆದಿದ್ದಳು. ಅಲ್ಲದೇ ಮಗಳನ್ನು ವಿದೇಶದಲ್ಲಿ ಇಂಜಿನಿಯರಿಂಗ್ ಓದಿಸುವುದಕ್ಕೆ, ಒಂದು ಕೋಟಿ ರೂ. ಮನೆ ಖರೀದಿಸಿದ್ದೇನೆಂದು ಹೇಳಿ ಹಲವರಿಂದ ಸಾಲ ಪಡೆದಿದ್ದಳು.
ಚಿನ್ನಾಭರಣ ಅಡವಿಟ್ಟು ಜನ ಲಕ್ಷ ಲಕ್ಷ ಸಾಲ ಕೊಟ್ಟಿದ್ದರು. ಸುಮಾರು 3 ಕೋಟಿಗೂ ಅಧಿಕ ಹಣ ಪಡೆದು ಮೋಸ ಮಾಡಿರುವ ಆರೋಪ ಮಹಿಳೆ ಮೇಲಿದೆ. ಹೆಂಡತಿ ವಂಚನೆಗೆ ಪತಿ ವಿರೂಪಾಕ್ಷಪ್ಪ ಸಾಥ್ ನೀಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಇನ್ನೂ ಓರ್ವ ಮಹಿಳೆಯಿಂದಲೇ 45 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ವಂಚನೆಗೊಳಗಾದ ಜನ ಮಹಿಳೆಯನ್ನು ರಸ್ತೆಯಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆ ಹಾಗೂ ಪೆನ್‍ಷನ್‍ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.



