ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪ್ರತಿಯೊಂದು ಉದ್ಯೋಗಕ್ಕೂ ತರಬೇತಿ ಅವಶ್ಯವಾಗಿದ್ದು, ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸಲು ಹೊಲಿಗೆ, ಎಂಬ್ರಾಯಿಡರಿ ತರಬೇತಿ ಸಹಕಾರಿಯಾಗಲಿದೆ ಎಂದು ಬೆಂಗಳೂರಿನ ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕ ಸುರೇಶ ಜಿ. ಹಾಗೂ ಡಾ.ಪ್ರಕಾಶ್ ಹೊಸಮನಿ ಅಭಿಪ್ರಾಯಪಟ್ಟರು.
ಅವರು ಹಿಂದು ಸೇವಾ ಪ್ರತಿಷ್ಠಾನ, ಸೇವಾ ಮಿತ್ರ ಯೋಜನೆ ಲಕ್ಷ್ಮೇಶ್ವರ ವತಿಯಿಂದ ಪಟ್ಟಣದ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಾವಲಂಬನೆಗಾಗಿ ಹೊಲಿಗೆ ಮತ್ತು ಎಂಬ್ರಾಯಡರಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಕೆಲಸದ ಮಹತ್ವವನ್ನು ಅರಿತು, ತರಬೇತಿ ಪಡೆದುಕೊಂಡು ವೃತ್ತಿಯಲ್ಲಿ ನೈಪುಣ್ಯತೆಯನ್ನು ಸಾಧಿಸಿ, ಸ್ವಾವಲಂಬನೆಯಿಂದ ಜೀವನ ಸಾಗಿಸಬೇಕು ಎಂದರು. ಹಿಂದೂ ಸನಾತನ ಸಂಸ್ಥೆಯ ವಿದುಲಾ ಹಳದಿಪುರ ಮಾತನಾಡಿ, ಮಹಿಳೆಯರು ವೃತ್ತಿ ಜೀವನದಲ್ಲಿ ಸ್ವ-ಉದ್ಯೋಗದೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುವದು ಅವಶ್ಯವಾಗಿದೆ. ಮಹಿಳೆಯರಿಗೆ ಹಲವು ರೀತಿಯ ಸಾಲ ಸೌಲಭ್ಯಗಳು ಹಾಗೂ ಕೌಶಲ್ಯ ಯೋಜನೆಗಳಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ತರಬೇತಿ ಪಡೆದ 134 ಮಹಿಳೆಯರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಸಂಯೋಜಕ ಶಿವಲಿಂಗ ಆಡರಕಟ್ಟಿ, ಚೇತನ್ ಯಲಿಗಾರ, ಶಿವಶಂಕರ ಬ್ಯಾಡಗಿ, ಬಸವರಾಜ್ ಗೋಡಿ, ಪೂಜಾ ಮಾಮನಿ, ಚಂದ್ರು ಕುಂದಗೋಳ ಸೇರಿದಂತೆ ನೂರಾರು ಮಹಿಳೆಯರು ಇದ್ದರು.