ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸದ್ಯ ಈ ಸಂಬಂಧ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಡೈರೆಕ್ಟರ್ ನಂದ ಕಿಶೋರ್ ದರ್ಶನ್ಗೆ ಜಾಮೀನು ಸಿಕ್ಕಿದ್ದು, ಖುಷಿ ಆಯ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು ಈ ಬಗ್ಗೆ ಮಾತನಾಡಿದ ಅವರು, ಒಂದು ಸಂತೋಷದ ಸುದ್ದಿ ಅಂತಲೇ ಹೇಳಬಹುದು. ನಾನು ದೇವಸ್ಥಾನದಲ್ಲಿದ್ದೆ ಈಗ ಗೊತ್ತಾಯ್ತು. ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದೆ ತುಂಬಾ ತುಂಬಾ ಸಂತೋಷ ಆಯಿತು. ಅವರಿಗೆ, ಅವರ ಕುಟುಂಬಸ್ಥರಿಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. ಕನ್ನಡ ಚಿತ್ರರಂಗದಲ್ಲಿ ಮತ್ತೆ ಸಂಭ್ರಮ ಮನೆ ಮಾಡುತ್ತದೆ. ಎಲ್ಲರಿಗೂ ಹ್ಯಾಪಿ ದೀಪಾವಳಿ ಎಂದು ನಂದ ಕಿಶೋರ್ ಹೇಳಿದ್ದಾರೆ.
ಇನ್ನೂ ದರ್ಶನ್ ಅವರಿಗೆ ಬೆನ್ನು ನೋವು ಇದ್ದ ಕಾರಣ ಅವರಿಗೆ ಜಾಮೀನು ನೀಡಬೇಕೆಂದು ನಟನ ಪರ ವಕೀಲ ಸಿವಿ ನಾಗೇಶ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಸಂಬಂಧ ಹೈಕೋರ್ಟ್ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠ ಇದೀಗ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಜಾಮೀನು ಕೇವಲ 6 ವಾರಗಳು ಮಾತ್ರ ಇದ್ದು ಇದಕ್ಕೆ ಷರತ್ತುಗಳನ್ನು ವಿಧಿಸಲಾಗಿದೆ.










