ವಿಜಯಸಾಕ್ಷಿ ಸುದ್ದಿ, ರೋಣ : ಕುಟುಂಬದ ಉನ್ನತಿಗೆ ಮಹಿಳೆಯರ ಕೊಡುಗೆ ದೊಡ್ಡದು ಎಂಬುದನ್ನು ಮುಚ್ಚಿಡಲಾಗದು ಎಂದು ಹೃದಯ ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳಕುಂದರಿ ಹೇಳಿದರು.
ಅವರು ಮಂಗಳವಾರ ಮಾತೋಶ್ರೀ ಬಸಮ್ಮ ಸಂಗನಗೌಡ ಪಾಟೀಲರವರ 20ನೇ ಪುಣ್ಯಸ್ಮರಣೆ ನಿಮಿತ್ತ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಮಹಿಳಾ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆ ತನ್ನ ಕುಟುಂಬ ನಿರ್ವಹಣೆ ಜೊತೆಗೆ ಕುಟುಂಬಸ್ಥರ ಸುಂದರ ಬದುಕಿಗೆ ತನ್ನನ್ನು ತಾನು ಮುಡಿಪಾಗಿಡುತ್ತಾಳೆ. ಅಲ್ಲದೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕಲ್ಪಿಸುವ ಮಹಿಳೆ ಕುಟುಂಬದ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಹೀಗಾಗಿ ಆಕೆ ನಿಸ್ವಾರ್ಥ ಭಾವನೆ ಹೊಂದಿದವಳು ಎನ್ನುವುದರಲ್ಲಿ ಅನುಮಾನವಿಲ್ಲ ಎಂದರು.
ಮುಖ್ಯವಾಗಿ ಮಾತೋಶ್ರೀ ಬಸಮ್ಮತಾಯಿಯವರು 20 ವರ್ಷಗಳ ಹಿಂದೆಯೇ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ಕೊಟ್ಟಿರುವುದು ಮಹತ್ತರವಾದ ಮೈಲುಗಲ್ಲು. ಮಹಿಳಾ ಮಂಡಳ ಕಟ್ಟುವ ಮೂಲಕ ಬಡ ಮಹಿಳೆಯರ ಪಾಲಿಗೆ ಆಶಾಕಿರಣವಾದ ಮಾತೋಶ್ರೀ ಅವರು ಮಹಿಳೆಯರ ಸಮಾಜಮುಖಿ ಹಾಗೂ ಸುಂದರ ಬದುಕಿಗೆ ಸಹಾಯ ಹಸ್ತ ಚಾಚುತ್ತಿದ್ದರು ಎಂದರು.
ಸಾನ್ನಿಧ್ಯವನ್ನು ಗುರುಪಾದ ಶ್ರೀಗಳು, ಅಧ್ಯಕ್ಷತೆಯನ್ನು ಅನ್ನಪೂರ್ಣಮ್ಮ ಪಾಟೀಲ ವಹಿಸಿದ್ದರು. ಅನ್ನಪೂರ್ಣಮ್ಮ ನಾಡಗೌಡ, ಈರಮ್ಮ ಪಾಟೀಲ, ಗಿರಿಜಮ್ಮ ಪಾಟೀಲ, ಶಶಿಕಲಾ ಪಾಟೀಲ, ಶೋಭಾ ಮೇಟಿ, ರಂಗಮ್ಮ ಭಜಂತ್ರಿ, ವಿದ್ಯಾ ದೊಡ್ಡಮನಿ, ನೀಲಮ್ಮಾ ಬೋಳನವರ, ವನಜಾ ರೆಡ್ಡೆರ, ಗೀತಾ ಕೊಪ್ಪದ, ನೀಲಮ್ಮ ಪಾಟೀಲ, ದಾನೇಶ್ವರ ಭಜಂತ್ರಿ ಸೇರಿದಂತೆ ಅನೇಕ ಮಹಿಳಾ ಮುಖಂಡರು ಉಪಸ್ಥಿತರಿದ್ದರು.



