ಸಿರಿಧಾನ್ಯಗಳನ್ನು ನಿಯಮಿತವಾಗಿ ಬಳಸಿ : ಸ್ಪೂರ್ತಿ ಜಿ.ಎಸ್

0
Women's Kisan Day and Farmer-Scientist Discussion Program at KVK
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕುಟುಂಬ ಮತ್ತು ಕೃಷಿಯಲ್ಲಿ ಮಹಿಳೆಯರ ಪಾತ್ರ ಅಗಾಧವಾಗಿದ್ದು, ನವೀನ ತಾಂತ್ರಿಕತೆಗಳನ್ನು, ಇಲಾಖೆಯಲ್ಲಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರೆಯಬೇಕು. ಕುಟುಂಬದ ಆರೋಗ್ಯ ಮಹಿಳೆಯರ ಕೈಯಲ್ಲಿದೆ ಎಂದು ಕೃಷಿ ಉಪ ನಿರ್ದೇಶಕರಾದ ಸ್ಪೂರ್ತಿ ಜಿ.ಎಸ್ ಅಭಿಪ್ರಾಯಪಟ್ಟರು.

Advertisement

ಕೃಷಿ ಇಲಾಖೆಯ ಆತ್ಮ ಯೋಜನೆ ಗದಗ ಹಾಗೂ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಹಯೋಗದೊಂದಿಗೆ ಹುಲಕೋಟಿಯ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ `ಮಹಿಳಾ ಕಿಸಾನ್ ದಿನಾಚರಣೆ ಹಾಗೂ ರೈತರ-ವಿಜ್ಞಾನಿಗಳ ಚರ್ಚಾಗೋಷ್ಠಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಜೀವನಶೈಲಿಯ ಕಾರಣದಿಂದ ಅನೇಕ ರೋಗಗಳು ಕಾಡುತ್ತಿದ್ದು, ಇದಕ್ಕೆ ಪರಿಹಾರವಾಗಿ ಸಿರಿಧಾನ್ಯಗಳನ್ನು ನಿಯಮಿತವಾಗಿ ಬಳಸಬೇಕು. ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಆದಾಯ ತರುವ ಚಟುವಟಿಕೆಗಳನ್ನು ಮಾಡುತ್ತಾ ಆರ್ಥಿಕವಾಗಿ ಸಬಲರಾಗಬೇಕು, ಮಕ್ಕಳ ಶಿಕ್ಷಣ ಹಾಗೂ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ರೈತ ಮಹಿಳೆ, ಅರಹುಣಸಿಯ ಶಿಲ್ಪಾ ಕುರಿ, ಸಾವಯವ ಕೃಷಿಗೆ ಒತ್ತು ಕೊಟ್ಟು, ಸರಕಾರದ ವಿವಿಧ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸುತ್ತಾ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಪ್ರಗತಿಪರ ರೈತ ಮಹಿಳೆ ಅನಿತಾ ಶಿ.ಕುರ್ತಕೋಟಿ ಮಾತನಾಡಿ, ತಮ್ಮ ಕೃಷಿ ಜೀವನದ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿಗಳು ಹಾಗೂ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಹುಲಕೋಟಿ ಮುಖ್ಯಸ್ಥರಾದ ಡಾ. ಸುಧಾ ವ್ಹಿ.ಮಂಕಣಿ ಮಾತನಾಡುತ್ತಾ, ಮಣ್ಣಿನ ಸಂರಕ್ಷಣೆಯನ್ನು ಕಾಪಾಡಿಕೊಳ್ಳಲು ಸಾವಯವ, ಜೈವಿಕ ಗೊಬ್ಬರಗಳನ್ನು ಕೃಷಿಯಲ್ಲಿ ಬಳಕೆ ಮಾಡಬೇಕು. ಭಾರತ ಹಳ್ಳಿಗಳ ನಾಡು. ಮಹಿಳೆಯ ಅಭಿವೃದ್ಧಿಯಾದರೆ ಕೃಷಿ ಅಭಿವೃದ್ಧಿಯಾದಂತೆ. ಕೃಷಿ ಅಭಿವೃದ್ಧಿಯಾದರೆ, ಹಳ್ಳಿಗಳು ಅಭಿವೃದ್ಧಿಯಾದಂತೆ. ಹಳ್ಳಿಗಳು ಅಭಿವೃದ್ಧಿಯಾದರೆ, ದೇಶ ಅಭಿವೃದ್ಧಿಯಾದಂತೆ. ಮಹಿಳೆಯರು ಸ್ವಾವಲಂಬಿಗಳಾಗಿ, ಕೃಷಿ ಸಂಸ್ಕರಣೆಗಳಂತಹ ಗುಡಿಕೈಗಾರಿಕೆಗಳನ್ನು ಮಾಡಿ, ಮೌಲ್ಯವರ್ಧನೆಗೆ ಒತ್ತು ನೀಡಿ, ಸಿರಿಧಾನ್ಯಗಳನ್ನು ಬೆಳೆಸಿ ಮತ್ತು ಬಳಸಲು ಕರೆ ನೀಡಿದರು.

ನಂತರ, ತಾಂತ್ರಿಕ ಅಧಿವೇಶನಗಳಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಹೇಮಾವತಿ ಹಿರೇಗೌಡರ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿ ಯಶಸ್ವಿಯಾದ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.

ಮಹಿಳೆಯರು ಕುಟುಂಬದ ಆರೋಗ್ಯದ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಮೂಲಕ ಮಹಿಳೆಯರನ್ನು ಎಲ್ಲಾ ರಂಗದಲ್ಲಿ ಸಮಾಜದ ಮುಖ್ಯವಾಹಿನಿಗೆ ತರುವುದು ಇಂದಿನ ಅವಶ್ಯಕತೆಯಾಗಿದೆ. ಪ್ರತಿ ದಿನಾಚರಣೆಗೂ ತನ್ನದೇ ಆದ ವಿಶೇಷತೆ ಇರುವಂತೆ ರೈತ ಮಹಿಳಾ ದಿನಾಚರಣೆಗೂ ಪ್ರಾಮುಖ್ಯತೆಯಿದ್ದು, ಗ್ರಾಮೀಣ ಭಾಗದಲ್ಲಿ ಕೃಷಿ ಅಭಿವೃದ್ಧಿ ಮತ್ತು ಆಹಾರ ಭದ್ರತೆಯಲ್ಲಿ ಅವಳ ಪಾತ್ರ ಅತಿ ಪ್ರಮುಖವಾಗಿದೆ. ಕೃಷಿ ಎಂದ ಕೂಡಲೇ ಪುರುಷನಷ್ಟೇ ಅಲ್ಲ, ಮಹಿಳೆಯ ಸಾಧನೆ ಪುರುಷರಿಗಿಂತ ಕಡಿಮೆ ಏನೂ ಇಲ್ಲ ಎಂದು ಡಾ. ಸುಧಾ ವ್ಹಿ.ಮಂಕಣಿ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here