ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜೈನ ಧರ್ಮ ಮತ್ತು ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಾಗೂ ಅಪಪ್ರಚಾರ ಮಾಡುತ್ತಿರುವವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜೈನ ಸಮಾಜದ ಮುಖಂಡ ಹಾಗೂ ಒಡೆಯರ ಮಲ್ಲಾಪುರ ಗ್ರಾ.ಪಂ ಸದಸ್ಯ ಪದ್ಮರಾಜ ಪಾಟೀಲ ಆಗ್ರಹಿಸಿದರು.
ಅವರು ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ರೀತಿಯಲ್ಲಿ ಮಾತನಾಡುವ ಕ್ರಮ ಖಂಡಿಸಿ ಮಂಗಳವಾರ ಪಟ್ಟಣದಲ್ಲಿ ದಿಗಂಬರ ಜೈನ ಸಮಾಜದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಧನಂಜಯ ಎಂ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಜೈನ ಧರ್ಮ ಹಾಗೂ ವೀರೇಂದ್ರ ಹೆಗಡೆಯವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿರುವ ಗಿರೀಶ್ ಮಟ್ಟೆಣ್ಣನವರನ್ನು ಕೂಡಲೇ ಬಂಧಿಸಬೇಕು. ಜೈನ ಸಮಾಜ ಸತ್ಯ, ಶಾಂತಿ, ಅಹಿಂಸಾ ಧರ್ಮ ಪರಿಪಾಲನೆಗೆ ಹೆಸರಾಗಿದೆ. ಧರ್ಮಸ್ಥಳ ಕೇವಲ ಒಂದು ಜಾತಿ-ಜನಾಂಗಕ್ಕೆ ಸೇರಿದ ಧಾರ್ಮಿಕ ಕೇಂದ್ರವಲ್ಲ. ಅದು ಎಲ್ಲ ಧರ್ಮದ ಕೋಟ್ಯಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ತ್ರಿವಿಧ ದಾಸೋಹ ಸೇವೆಯ ಜತೆಗೆ ನಾಡಿನ ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚೇತನ, ವ್ಯಸನಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ. ಸ್ವ-ಸಹಾಯ ಸಂಘಗಳು ಲಾಭದ ಉದ್ದೇಶಕ್ಕಾಗಿರದೇ ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸಮರ್ಪಿಸಿಕೊಂಡಿದೆ.
ಆದಾಗ್ಯೂ ಕೆಟ್ಟ ಉದ್ದೇಶದಿಂದ ಪವಿತ್ರ ಕ್ಷೇತ್ರಕ್ಕೆ ಕಳಂಕ ಹಚ್ಚುವ ಹೀನ ಕೃತ್ಯವನ್ನು ಜೈನ ಸಮಾಜ ಖಂಡಿಸುತ್ತದೆ. ಗಿರೀಶ ಮಟ್ಟೆಣ್ಣವರಂತವರ ವಿರುದ್ಧ ಸಮಾಜದ ಮುಖಂಡರು ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತೇವೆ. ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್.ಐ.ಟಿ ತನಿಖೆಯನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ತನಿಖೆಯ ಬಗ್ಗೆ ಸರ್ಕಾರವು ಕೂಡಲೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು/ನಿರ್ಧಾರ ತೆಗೆದುಕೊಂಡು ಹಾದಿಬೀದಿಯಲ್ಲಿ ಧರ್ಮಕ್ಷೇತ್ರದ ಬಗ್ಗೆ ಅಪಪ್ರಚಾರ ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವರ ಬಾಯಿ ಮುಚ್ಚಿಸಬೇಕು ಎಂದರು.
ಈ ವೇಳೆ ವಕೀಲರಾದ ಎ.ಬಿ. ಪಾಟೀಲ, ಆರ್.ಸಿ. ಪಾಟೀಲ, ಬಿ.ಎಫ್. ಘೋಂಗಡಿ, ಸಮಾಜದ ಮುಖಂಡರಾದ ಭರತಣ್ಣ ಬರಿಗಾಲಿ, ವಸಂತ ಪಾಟೀಲ, ಅನಂತರಾಜ ಮಿಣಜಿಗಿ, ವೈಭವ ಗೋಗಿ, ವಸಂತ ಪಾಟೀಲ, ಮಹಾವೀರ ಪಾಟೀಲ, ಸುನೀಲ ಪಾಟೀಲ, ಅಜಿತ ಬರಗಾಲಿ ಸೇರಿದಂತೆ ಸಮಾಜದ ಹಿರಿಯರು, ಯುವಕರು ಇದ್ದರು.
ನಂದಕುಮಾರ ಪಾಟೀಲ ಹಾಗೂ ವಿನಯ ಪಾಟೀಲ ಮಾತನಾಡಿ, ಈ ಹುನ್ನಾರ ಇಲ್ಲಿಗೆ ನಿಲ್ಲದಿದ್ದರೆ ಜೈನ ಸಮಾಜ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತದೆ ಎಂದು ಹೇಳಿದರು.