ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಸೋಮವಾರ ಸಾರ್ವಜನಿಕರಿಂದ ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ತಹಸೀಲ್ದಾರ ಕಚೇರಿಯಲ್ಲಿ ಆದಾಯ ಪ್ರಮಾಣಪತ್ರ ಸೇರಿ ಇತರೆ ಕೆಲ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬ ಮತ್ತು ಆಹಾರ ಇಲಾಖೆಯಲ್ಲಿ ಪಡಿತರ ಚೀಟಿಗಳ ದೂರುಗಳು, ರಸ್ತೆ ಅತಿಕ್ರಮಣ ಸೇರಿ ಕೆಲ ದೂರುಗಳು ಸ್ವೀಕೃತವಾದವು.
ಪಟ್ಟಣದ ಮುಖ್ಯ ಬಜಾರ್ ರಸ್ತೆಯ ಅಕ್ಕಪಕ್ಕದ ವ್ಯಾಪಾರಸ್ಥರು ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದಾರೆ ಮತ್ತು ವ್ಯಾಪಾರ-ವಹಿವಾಟು ರಸ್ತೆಯಲ್ಲಿಯೇ ನಡೆಯುತ್ತದೆ. ಇದರಿಂದ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಮತ್ತು ಸರ್ಕಾರಿ ಜಾಗ ಒತ್ತುವರಿಯಾಗುತ್ತಿರುವ ಬಗೆಗಿನ ದೂರಿನ ಬಗ್ಗೆ ಪುರಸಭೆ ಶೀಘ್ರ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಹಾಗೂ ಪೊಲೀಸರಿಗೆ ಸೂಚಿಸಿದರು.
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸರ್ಕಾರಿ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಿಗೆ ಸರಿಯಾದ ಆಹಾರ, ನೀರು ಸೇರಿದಂತೆ ಎಲ್ಲ ಸೌಲಭ್ಯಗಳ ಪೂರೈಕೆ ಮತ್ತು ಮುಖ್ಯವಾಗಿ ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಿ ಗುಣಮಟ್ಟವನ್ನು ಪರೀಕ್ಷಿಸಬೇಕು. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಸಹ ಮೇಲಿಂದ ಮೇಲೆ ಕೈಗೊಳ್ಳಬೇಕು. ಯಾವುದೇ ವಿಷಯದಲ್ಲಿ ಅಲಕ್ಷ್ಯ ವಹಿಸಿದ ಬಗ್ಗೆ ದೂರುಗಳು ಬರದಂತೆ ಕೆಲಸ ನಿರ್ವಹಿಸಿ ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ, ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ಹಾಜರಾತಿ ಬಗ್ಗೆ ದೂರುಗಳಿದ್ದು, ಇನ್ನುಮೇಲೆ ಎಲ್ಲ ಕಚೇರಿಗಳಲ್ಲಿ ಚಲನ-ವಲನ ವಹಿ ಮತ್ತು ಹಾಜರಾತಿ ವಹಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಲವು ಇಲಾಖೆಯವರು ತಮ್ಮ ಕೆಲಸದ ವೇಳೆಯಲ್ಲಿ ಹೊರಗಡೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆಯೂ ದೂರುಗಳಿವೆ. ಅವುಗಳು ಸರಿಯಾಗುವಂತೆ ಮಾಡುವದು ಅಧಿಕಾರಿಗಳ ಕರ್ತವ್ಯವಾಗಿದೆ. ಸಿಬ್ಬಂದಿಗಳು ಕೆಲಸದ ಅವಧಿಯಲ್ಲಿ ಬೇರೆ ಬೇರೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವದನ್ನು ನಿರ್ಬಂಧಿಸಿ ಇಂತಹ ದೂರುಗಳು ಬರದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು.
ಈ ವೇಳೆ ತಹಸೀಲ್ದಾರ ವಾಸುದೇವ ಸ್ವಾಮಿ, ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಆರೋಗ್ಯ, ಆಹಾರ, ಸಾರಿಗೆ, ಕೃಷಿ, ತೋಟಗಾರಿಕೆ, ಪೊಲೀಸ್, ಶಿಕ್ಷಣ, ಸಮಾಜ ಕಲ್ಯಾಣ, ಪುರಸಭೆ, ಹೆಸ್ಕಾಂ, ಖಜಾನೆ, ಉಪನೋಂದಣಾಧಿಕಾರಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಇಲಾಖೆ ಅಧಿಕಾರಿಗಳಿಗೆ ನೀಡಲಾಗಿರುವ ವಾಹನಗಳನ್ನು ಅವರು ಕೆಲಸ ನಿರ್ವಹಿಸುವ ಕೇಂದ್ರದಲ್ಲಿ ಮಾತ್ರ ಉಪಯೋಗಿಸಬೇಕು. ಬೇರೆ ಬೇರೆ ಊರುಗಳಿಗೆ ತೆರಳಲು ಸರ್ಕಾರಿ ವಾಹನಗಳನ್ನು ಉಪಯೋಗಿಸುವಂತಿಲ್ಲ. ಇವುಗಳು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರಲ್ಲದೆ, ಇಂದು ಸ್ವೀಕರಿಸಿದ ದೂರುಗಳ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಜಯ ಬಿರಾದಾರ ಹೇಳಿದರು.