ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿದೆ.
ಭಾನುವಾರ ನವಿ ಮುಂಬೈಯ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿದೆ. ಇದಕ್ಕೂ ಮೊದಲು ಭಾರತ ತಂಡವು ಎರಡು ಬಾರಿ ಫೈನಲ್‌ಗೆ ತಲುಪಿದ್ದರೂ ಟ್ರೋಫಿ ಗೆಲ್ಲಲು ವಿಫಲವಾಗಿತ್ತು. ಆದರೆ ಈ ಬಾರಿ ತವರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಗೆಲುವಿನ ಸಂಕಲ್ಪ ಸಾಧಿಸಿ, 52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಚಾಂಪಿಯನ್ ಆಗಿದೆ.
ಸಮಗ್ರ ಟೂರ್ನಿಯಲ್ಲಿ ಏಳುಬೀಳುಗಳ ನಡುವೆಯೂ ಹೋರಾಡಿದ ಭಾರತೀಯ ಮಹಿಳೆಯರು ಕೊನೆಗೂ ಕನಸಿನ ಟ್ರೋಫಿ ಎತ್ತಿದ್ದಾರೆ. ಸುಮಾರು 25 ವರ್ಷಗಳ ಬಳಿಕ ವಿಶ್ವಕಪ್ ಹೊಸ ಚಾಂಪಿಯನ್ ಕಂಡಿದೆ.
ಭಾರತದ ಬ್ಯಾಟಿಂಗ್ ಹೈಲೈಟ್ಸ್:
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ಶಫಾಲಿ ವರ್ಮಾ (78 ಎಸೆತಗಳಲ್ಲಿ 87), ದೀಪ್ತಿ ಶರ್ಮಾ (58 ಎಸೆತಗಳಲ್ಲಿ 58), ಸ್ಮೃತಿ ಮಂಧಾನ (45) ಪ್ರಮುಖ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾದ ಖಾಕಾ 3 ವಿಕೆಟ್ ಪಡೆದರು.
ಬೌಲಿಂಗ್‌ನಲ್ಲಿ ಭಾರತ ಪ್ರಭಾವ:
299 ರನ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಕಂಡರೂ, ಅಮನ್‌ಜೋತ್ ಕೌರ್ ಅವರ ಅದ್ಭುತ ಫೀಲ್ಡಿಂಗ್ ಹಾಗೂ ಶಫಾಲಿ ವರ್ಮಾ ಅವರ ಸ್ಫೋಟಕ ಬೌಲಿಂಗ್ ಪಂದ್ಯವನ್ನು ಭಾರತ ಕಡೆ ತೂಗಿತು. ದೀಪ್ತಿ ಶರ್ಮಾ ಕೂಡಾ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.
ಲಾರಾ ವೋಲ್ವಾರ್ಡ್ ಅವರ ಶತಕ ವ್ಯರ್ಥವಾಯಿತು; ಕೊನೆಗೆ ದಕ್ಷಿಣ ಆಫ್ರಿಕಾ 246 ರನ್‌ಗಳಿಗೆ ಆಲೌಟ್ ಆಯಿತು.
ಇತಿಹಾಸ ನಿರ್ಮಿಸಿದ ನಾಯಕಿ:
ಈ ಗೆಲುವಿನೊಂದಿಗೆ ಹರ್ಮನ್‌ಪ್ರೀತ್ ಕೌರ್ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆದ್ದ ಭಾರತದ ಮೊದಲ ಮಹಿಳಾ ನಾಯಕಿಯಾಗಿದ್ದಾರೆ.



