ವಿಜಯಸಾಕ್ಷಿ ಸುದ್ದಿ, ನರೇಗಲ್ : ಸಂಗೀತದಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ. ಸಂಗೀತವನ್ನು ಆಯಾ ಸಮಯದಲ್ಲಿ ಆಸ್ವಾದಿಸುವುದರಿಂದ ರೋಗಗಳು ಸಹ ದೂರವಾಗುತ್ತವೆ ಎಂದು ಅಬ್ಬಿಗೇರಿಯ ಪಂ. ಪಾಲಾಕ್ಷಯ್ಯ ಅರಳೆಲೆಮಠ ಅಭಿಪ್ರಾಯಪಟ್ಟರು.
ಪಟ್ಟಣದ ಕೋಡಿಕೊಪ್ಪದಲ್ಲಿನ ಶ್ರೀ ಅನ್ನದಾನೇಶ್ವರ ನಗರದಲ್ಲಿ ಸ್ವರ ಮಂದಾರ ಸಂಗೀತ ಪಾಠಶಾಲೆಯ ಆಶ್ರಯದಲ್ಲಿ ಆಚರಿಸಲಾದ ವಿಶ್ವ ಸಂಗೀತ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ ಎಂ.ಎ. ಹಿರೇವಡೆಯರ ಮಾತನಾಡಿ, ಮನುಷ್ಯನ ದೇಹವು ಸಂಗೀತದ ತತ್ವಗಳಿಂದ ಮಾಡಲ್ಪಟ್ಟದೆ. ಸಂಗೀತದ ನಾದ ಎಲ್ಲಿಂದ ಕೇಳಿ ಬಂದರೂ ಮನುಷ್ಯ ಒಂದು ಕ್ಷಣ ನಿಂತು ಅದನ್ನು ಆಸ್ವಾದಿಸಿ ಮುಂದೆ ಹೋಗುತ್ತಾನೆ. ಇಂತಹ ಶಕ್ತಿಯಿರುವ ಸಂಗೀತವನ್ನು ಆಸ್ವಾದಿಸಿ, ಆನಂದಿಸುವ ಗುಣ ನಮ್ಮೆಲ್ಲರಲ್ಲಿ ಬರಬೇಕು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಮಾತನಾಡಿ, ಸಂಗೀತ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂಗೀತ ಕಲಿಯಲು ಬಂದಿರುವ ಪ್ರತಿಯೊಬ್ಬರೂ ಸಹ ರಾಗದ ಸಂಕಣ್ಣನಂತೆ ಪ್ರಸಿದ್ಧರಾಗಬೇಕೆಂದು ಹೇಳಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ರಾಜಯೋಗಿನಿ ಬಿ.ಕೆ. ಸವಿತಕ್ಕನವರು ಮಾತನಾಡಿ, ಸಂಗೀತವನ್ನು ಈ ಜಗತ್ತಿಗೆ ನೀಡಿದವನು ಪರಮಶಿವ. ಈ ಸೃಷ್ಟಿಯ ನಿರ್ಮಾಣಕ್ಕೆ ಕಾರಣನಾದ ಶಿವ ಸಂಗೀತ ಪ್ರಿಯನಾಗಿದ್ದ.
ಶಿಕ್ಷಕಿ ಗೀತಾ ಭೋಪಳಾಪೂರ ತೆರೆದಿರುವ ಈ ಸಂಗೀತ ಪಾಠಶಾಲೆ ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುವುದರ ಮೂಲಕ ಈ ನಾಡಿನಲ್ಲಿ ಉತ್ತಮ ಹೆಸರನ್ನು ಗಳಿಸಲಿ ಎಂದು ಆಶೀರ್ವದಿಸಿದರು.
ಸಭೆಯನ್ನುದ್ದೇಶಿಸಿ ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿದರು. ವೇದಿಕೆಯ ಮೇಲೆ ನರೇಗಲ್ ನೆಲ-ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಜಗದೀಶ ಸಂಕನಗೌಡರ, ಆನಂದ ಕುಲಕರ್ಣಿ ಉಪಸ್ಥಿತರಿದ್ದರು. ನ್ಯಾಯವಾದಿ ನೀರಲೋಟಿ ದಂಪತಿಗಳು ಕಾರ್ಯಕ್ರಮ ನಿರೂಪಿಸಿದರು. ಗೀತಾ ಭೋಪಳಾಪೂರ ಸ್ವಾಗತಿಸಿದರು. ಜಯಶ್ರೀ ಜೋಷಿ ವಂದಿಸಿದರು.