ತಂಬಾಕು ಸೇವನೆಯಿಂದ ಆರೋಗ್ಯ ಹಾನಿ

0
World No Tobacco Day
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಯುವಕರು ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರ ಉಳಿಯುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕಿದೆ. ವಿಶ್ವದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯ ಒಂದೇ ಕಾರಣದಿಂದ ಪ್ರತಿವರ್ಷ ಲಕ್ಷಾಂತರ ಜನರು ಜೀವ ಕಳೆದುಕೊಳ್ಳುತ್ತಿರುವುದು ಅತ್ಯಂತ ಗಂಭೀರವಾದ ಸಂಗತಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ವೆಂಕಟೇಶ ರಾಠೋಡ ಹೇಳಿದರು.

Advertisement

ನಗರದ ಕೆಎಲ್‌ಇ ಸಂಸ್ಥೆಯ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಸಹಯೋಗದಲ್ಲಿ ಶುಕ್ರವಾರ ಜರುಗಿದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನ ದೇಹದ ಮೇಲೆ ಅಲ್ಲದೆ ತಂಬಾಕು ಬೆಳೆ ಹೆಚ್ಚಳದಿಂದ ಪರಿಸರದ ಮೇಲೆಯೂ ದುಷ್ಪರಿಣಾಮ ಹೆಚ್ಚುತ್ತಿದೆ. ಅಧಿಕ ಇಳುವರಿ ಪಡೆಯುವ ಸಲುವಾಗಿ ಬೆಳೆಗಾರರು ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯ ತೀವ್ರಗತಿಯಲ್ಲಿ ಹದಗೆಡುವುದಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಯುವಕರು, ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಬಳಸುವುದಿಲ್ಲ ಎಂಬ ಸಂಕಲ್ಪ ಮಾಡಬೇಕಿದೆ. ಈ ವಿಷಯದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದಿಶೆಯಲ್ಲಿ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ ಎಂದರು.

ಪ್ರಾಚಾರ್ಯ ಜೈಹನುಮಾನ ಎಚ್.ಕೆ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಆಧುನಿಕ ಜೀವನ ಶೈಲಿಯಿಂದ ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿದ್ದು, ತಮ್ಮ ಉಜ್ವಲ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರುವಂತೆ ಸಲಹೆ ನೀಡಿದರು.

ಉಪನ್ಯಾಸಕರಾದ ಡಾ.ವಿಜಯ ಮುರದಂಡೆ, ಎಸ್.ಟಿ. ಮೂರಶಿಳ್ಳಿನ, ಶರತ್ ದರಬಾರೆ, ಡಾ. ಜ್ಯೋತಿ ಸಿ.ವಿ, ಡಾ. ಶ್ರೀನಿವಾಸ. ಪಿ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಸವರಾಜ ಕರಡಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ.ಬಿ. ರಣಗಟ್ಟಿಮಠ ಸ್ವಾಗತಿ, ಪರಿಚಯಿಸಿದರು. ವಿದ್ಯಾರ್ಥಿನಿ ಮುಕ್ತಾ ಹಡಪದ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here