ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟಾರೆಯಾಗಿ 499 ರನ್‌ಗಳ ಅತಿ ಹೆಚ್ಚು ಮೊತ್ತ ಕಲೆಹಾಕಿ, ಟಿ20 ವಿಶ್ವಕಪ್‌ನ ನಾಕೌಟ್ ಸುತ್ತಿನಲ್ಲಿ ಭಾರತೀಯ ತಂಡದ ಅತಿದೊಡ್ಡ ಸ್ಕೋರ್ ದಾಖಲೆ ನಿರ್ಮಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 253 ರನ್ ಗಳಿಸಿತು. ಈ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಸುತ್ತಿನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆಯನ್ನು ಬರೆಯಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಗೆಲುವಿಗಾಗಿ ಹೋರಾಟ ನಡೆಸಿತ್ತಾದರೂ 246 ರನ್‌ಗಳಿಸಲಷ್ಟೇ ಶಕ್ತವಾಗಿ 7 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಈ ಪಂದ್ಯ ರನ್‌ಗಳ ವಿಚಾರದಲ್ಲಿ ದಾಖಲೆ ಬರೆಯುವುದರ ಜೊತೆಗೆ ವೀಕ್ಷಣೆಯ ವಿಚಾರದಲ್ಲೂ ವಿಶ್ವದಾಖಲೆ ನಿರ್ಮಿಸಿದೆ.. ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಕಟಿಸಿರುವಂತೆ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಪಂದ್ಯವನ್ನು 65.2 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಇದು 2024 ರ ಯುನೈಟೆಡ್ ಸ್ಟೇಟ್ಸ್ ಪಂದ್ಯದಲ್ಲಿ ನಿರ್ಮಿಸಿದ ದಾಖಲೆಯನ್ನು ಮುರಿದಿದೆ’ ಎಂದು ಬರೆದುಕೊಂಡಿದ್ದಾರೆ..
ಟೀಂ ಇಂಡಿಯಾ 19 ಸಿಕ್ಸರ್‌ಗಳನ್ನು, ಇಂಗ್ಲೆಂಡ್ 15 ಸಿಕ್ಸರ್‌ಗಳನ್ನು ಬಾರಿಸಿ, ಒಟ್ಟಾರೆ 34 ಸಿಕ್ಸರ್‌ಗಳೊಂದಿಗೆ ಅತಿ ಹೆಚ್ಚು ಸಿಕ್ಸರ್ ದಾಖಲೆ ನಿರ್ಮಿಸಿತು. ಜೊತೆಗೆ, ಒಟ್ಟು 73 ಬೌಂಡರಿಗಳೊಂದಿಗೆ ಈ ಪಂದ್ಯವು ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳ ದಾಖಲೆ ಕೂಡ ನಿರ್ಮಿಸಿತು. ಹೀಗಾಗಿ, 2026 ರ ಸೆಮಿಫೈನಲ್ ಟಿ20 ಕ್ರಿಕೆಟ್ ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.



