ವಿಜಯಸಾಕ್ಷಿ ಸುದ್ದಿ, ಕಡೂರು : ಈಶ ನಿರ್ಮಿತವಾದ ಪ್ರಪಂಚದಲ್ಲಿ ಭಗವಂತ ಏನೆಲ್ಲವನ್ನು ಕೊಟ್ಟಿದ್ದಾನೆ. ಅದರ ಕೃತಜ್ಞತೆಯನ್ನು ಅರಿತು ಬಾಳಿದರೆ ಜೀವನ ಸುಖಮಯ. ಆದರ್ಶ ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಅತ್ಯಂತ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಹೊಗರೆಖಾನ್ ಗಿರಿ ಶ್ರೀ ಸಿದ್ಧೇಶ್ವರಸ್ವಾಮಿ ಮಂಡಲ ಪೂಜಾ ನಿಮಿತ್ತ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾನವ ಜನ್ಮ ಶ್ರೇಷ್ಠವಾದುದು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಯುವ ಬುದ್ಧಿ ಶಕ್ತಿಯಿದೆ. ಅರಿವುಳ್ಳ ಜನ್ಮದಲ್ಲಿ ಹುಟ್ಟಿದ ಮೇಲೆ ಶಿವಜ್ಞಾನ ಪ್ರಾಪ್ತಿಗಾಗಿ ಗುರು ಕಾರುಣ್ಯಕ್ಕಾಗಿ ಶ್ರಮಿಸಬೇಕು. ಅರಿತು ಆಚರಿಸಿ ಬದುಕಿದರೆ ಬದುಕಿನ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಮರೆತು ಮಲಗಿದರೆ ಬದುಕು ದುರ್ಬಲಗೊಳ್ಳುತ್ತದೆ. ವೀರಶೈವ ಧರ್ಮದಲ್ಲಿ ತತ್ವ ತ್ರಯಗಳ ಮೂಲಕ ಜೀವನದಲ್ಲಿ ಶ್ರೇಯಸ್ಸು ಪ್ರಾಪ್ತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ.
ಅಂಗ ಅವಗುಣ ನೀಗಿ, ಲಿಂಗ ಗುಣ ಸಂಪನ್ನರಾಗಿ ಬದುಕಿ ಬಾಳಲು ವೀರಶೈವ ಧರ್ಮ ಬೋಧಿಸಿದೆ. ಸಕಲ ಜೀವಾತ್ಮರ ಒಳಿತನ್ನೇ ಬಯಸಿದ ವೀರಶೈವ ಧರ್ಮ ಕಾಲ ಕಾಲದಲ್ಲಿ ಮಾರ್ಗದರ್ಶನ ನೀಡಿದೆ ಎಂದರು.
ಹುಣಸಘಟ್ಟ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯರು, ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯರು, ತೆಂಡೇಕೆರೆ ಗಂಗಾಧರ ಶಿವಾಚಾರ್ಯರು, ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಉಮಾಶಂಕರ್, ಚಂದ್ರಶೇಖರ, ರಾಜು ತರೀಕೆರೆ, ಉಮೆಶ ಹೊಗರೆಹಳ್ಳಿ, ರೇಣುಕಯ್ಯ ಹೊಗರೇಹಳ್ಳಿ, ರುದ್ರಯ್ಯ ಹಾಗೂ ಸಿದ್ಧಯ್ಯ ಹೊಗರೆಖಾನ ಗಿರಿ ಮೊದಲಾದವರು ಉಪಸ್ಥಿತರಿದ್ದರು. ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಲೋಕ ಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು.
ನೇತೃತ್ವ ವಹಿಸಿದ ಬೀರೂರು ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ಚಿಂತನೆಗಳು ಸರ್ವರ ಬಾಳಿಗೆ ಬೆಳಕು ತೋರುತ್ತವೆ ಎಂದರು.
Advertisement