ಶಿವಮೊಗ್ಗ: ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ನಡೆದಿದೆ.
ಗುರುವಾರ ಈ ಘಟನೆ ಸಂಭವಿಸಿದ್ದು, ಪ್ರವಾಸದ ಉತ್ಸಾಹದಲ್ಲಿದ್ದ ಯುವಕರ ಕುಟುಂಬಗಳಲ್ಲಿ ಇದೀಗ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರಿನ ಕಾರ್ತಿಕ್ (31), ಪವನ್ (30), ನಕುಲ್ (19) ಹಾಗೂ ಚೇತನ್ (19) ನೀರುಪಾಲಾದ ಯುವಕರು. ಮದುವೆ ಕಾರ್ಯಕ್ರಮ ಮುಗಿಸಿಕೊಂಡ ಬಳಿಕ ಸ್ವಲ್ಪ ಸಮಯ ಕಳೆಯಲು ನಾಲ್ವರೂ ಸಮೀಪದ ಪ್ರವಾಸಿ ತಾಣವೊಂದಕ್ಕೆ ತೆರಳಲು ನಿರ್ಧರಿಸಿದ್ದರು. ಈ ವೇಳೆ ಗೂಗಲ್ನಲ್ಲಿ ನದಿ ಪ್ರದೇಶವನ್ನು ಹುಡುಕಿದಾಗ ಮಹಿಷಿ ಬಳಿಯ ತುಂಗಾ ನದಿಯ ಸ್ಥಳ ಕಂಡುಬಂದಿದೆ. ಬಳಿಕ ಗೂಗಲ್ ಮ್ಯಾಪ್ ಸಹಾಯದಿಂದ ನದಿ ತೀರಕ್ಕೆ ತೆರಳಿದ್ದಾರೆ.
ನದಿಯ ಬಳಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಓರ್ವ ಯುವಕ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಉಳಿದವರು ಒಬ್ಬರ ಹಿಂದೆ ಒಬ್ಬರು ನದಿಗೆ ಇಳಿದಿದ್ದು, ನಾಲ್ವರೂ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಓರ್ವ ಯುವಕನ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮಾಳೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರಲ್ಲಿ ಬೆಂಗಳೂರಿನ ಇಟ್ಟಮಡುವಿನ ಪವನ್, ಕತ್ರಿಗುಪ್ಪೆಯ ಕಾರ್ತಿಕ್ ಹಾಗೂ ತಲಘಟ್ಟಪುರದ ನಕುಲ್ ಕಾನೂನು ವ್ಯಾಸಂಗ ಮಾಡುತ್ತಿದ್ದರು. ಚೇತನ್ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.









