ಬೆಂಗಳೂರು: ಯೂಟ್ಯೂಬ್ ಸಂದರ್ಶನದ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆ ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಡಾಗ್ ಸತೀಶ್ ಅಲಿಯಾಸ್ ಸತೀಶ್ ನೀಡಿದ ದೂರಿನ ಮೇರೆಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 351 ಮತ್ತು 352ರಡಿ ರಜತ್ ಹಾಗೂ ಧನರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರು ಪ್ರಕಾರ, ಕಳೆದ ವರ್ಷದ ಡಿಸೆಂಬರ್ 12ರಂದು ರಜತ್ ಕರೆ ಮಾಡಿ ತಾನು ಮತ್ತು ತನ್ನ ಸ್ನೇಹಿತ ಧನರಾಜ್ ಸೇರಿ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದೇವೆ ಎಂದು ಹೇಳಿ ಸಂದರ್ಶನಕ್ಕೆ ಆಹ್ವಾನಿಸಿದ್ದರು. ಚಾನೆಲ್ ಆರಂಭದ ಭಾಗವಾಗಿ ನಿಮ್ಮ ಸಂದರ್ಶನವನ್ನು ಪ್ರಸಾರ ಮಾಡುತ್ತೇವೆ ಎಂದು ಹೇಳಿ ಮಾತನಾಡಿಸಿದ್ದರು ಎಂದು ಸತೀಶ್ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ವಿಡಿಯೋವನ್ನು ಅಪ್ಲೋಡ್ ಮಾಡುವಾಗ ತಮ್ಮ ಮಾತುಗಳನ್ನು ತಿರುಚಿ ತೋರಿಸಿ ಮಾನಹಾನಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂದರ್ಶನವನ್ನು ಎರಡು ಕ್ಯಾಮೆರಾ ಹಾಗೂ ಎರಡು ಮೊಬೈಲ್‌ಗಳಲ್ಲಿ ನಾಲ್ವರು ಸೇರಿ ಚಿತ್ರೀಕರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಫೆಬ್ರವರಿ 27ರಂದು ರಾತ್ರಿ 10:30ರ ಸುಮಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಹಾಕಿದ್ದಕ್ಕೆ ರಜತ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ. ಅಲ್ಲದೆ ಮಧ್ಯರಾತ್ರಿಯಲ್ಲಿಯೂ ರಜತ್ ಫೋನ್‌ನಿಂದ ಬೆದರಿಕೆ ಕರೆಗಳು ಬಂದಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ರಜತ್ ಹಾಗೂ ಧನರಾಜ್ ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಮಾನಹಾನಿ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿರುವ ಸತೀಶ್, ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



