ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಎಂಟು ರಾಜ್ಯಸಭಾ ಸದಸ್ಯರ ಅಮಾನತ್ತನ್ನು ಹಿಂಪಡೆಯುವವರೆಗೆ ರಾಜ್ಯಸಭಾ ಕಲಾಪವನ್ನು ಬಹಿಷ್ಕರಿಸಲು ವಿಪಕ್ಷಗಳು ನಿರ್ಧರಿಸಿವೆ ಎಂದು ರಾಜ್ಯಸಭೆಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.
ಮಂಗಳವಾರ ಶೂನ್ಯವೇಳೆಯ ನಂತರ ಮಾತನಾಡಿದ ಅವರು, ಇದಲ್ಲದೇ ಇನ್ನು ಎರಡು ಬೇಡಿಕೆಗಳನ್ನು ಈಡೇರಿಸಬೇಕು. ಕಾರ್ಪೋರೇಟ್ ಕಂಪನಿಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಉತ್ಪನ್ನ ಖರೀದಿಸುವಂತಿಲ್ಲ ಎಂಬ ನಿಯಮವನ್ನು ಮಾಡಬೇಕು. ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲು ಡಾ. ಸ್ವಾಮಿನಾಥನ್ ಆಯೋಗ ಸೂಚಿಸಿರುವ ಮಾರ್ಗಸೂಚಿ ಅನುಸರಿಸಬೇಕು. ಈ ಮೂರೂ ಬೇಡಿಕೆ ಈಡೇರುವವರೆಗೆ ರಾಜ್ಯಸಭಾ ಕಲಾಪ ಬಹಿಷ್ಕಾರ ಮಾಡಲು ವಿಪಕ್ಷಗಳು ನಿರ್ಧರಿಸಿವೆ ಎಂದು ಹೇಳಿದರು.
ಮಂಗಳವಾರ ಮುಂಜಾನೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸಿಂಗ್ ಪ್ರತಿಭಟನಾ ನಿರತ ಎಂಟು ಸಂಸದರಿಗೆ ಚಹಾ ನೀಡಲು ಹೋದಾಗ ಅವರು ನಿರಾಕರಿಸಿದ್ದರು. ನಂತರ ಪ್ರಧನಿ ಮೋದಿ, ‘ತಮ್ಮನ್ನು ಅವಮಾನಿಸಿದವರಿಗೆ ಚಹಾ ನೀಡಿ ಉಪಚರಿಸಲು ಹೋದ ಹರಿವಂಶ್ ಅವರದ್ದು ವಿಶಾಲ ಹೃದಯ’ ಎಂದು ಹೊಗಳಿದ್ದರು. ಈ ನಡುವೆ ಭಾನುವಾರ ತಮಗೆ ಅವಮಾನವಾಗಿದ್ದನ್ನು ಪ್ರತಿಭಟಿಸಿ ಉಪ ಸಭಾಪತಿ ಹರಿವಂಶ್ ಸಿಂಗ್ ಕೂಡ ಒಂದು ದಿನದ ಉಪವಾಸ ವೃತದಲ್ಲಿದ್ದಾರೆ.