- ಜೆಡಿಎಸ್ ಮುಳುಗುತ್ತಿರುವ ಹಡಗು ಹೇಳಿಕೆಗೆ ಮಾಜಿ ಸಿಎಂ ಎಚ್ಡಿಕೆ ಕೆಂಡಾಮಂಡಲ
ವಿಜಯಸಾಕ್ಷಿ ಸುದ್ದಿ, ಮೈಸೂರು
ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರಣ್‌ಸಿಂಗ್ ಹೇಳಿಕೆಗೆ ಕೆಂಡಮಂಡಲಾರದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಪಾಪ ಅವನಿಗೆ ಏನ್ ಗೊತ್ತು. ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಆತ ಬಂದಿರೋದು ದುಡ್ಡ ವಸೂಲಿ ಮಾಡುವುದಕ್ಕೆ. ನಾವೇನು ಬೆಂಬಲ ಕೋರಿ ಅವರ ಮನೆ ಬಾಗಿಲಿಗೆ ಹೋಗಿದ್ವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮೇಯರ್ ಚುನಾವಣೆಯಲ್ಲಿ ಬೆಂಬಲ ಕೋರಿ ಶಾಸಕ ಸಾ.ರಾ. ಮಹೇಶ್ ಕಚೇರಿಗೆ ಬಿಜೆಪಿ ನಾಯಕರು ಏಕೆ ಬಂದಿದ್ರು? ನಾವೇನು ಬೆಂಬಲ ಕೋರಿ ಅವರ ಬಳಿಗೆ ಹೋಗಿಲ್ಲ. ಅರುಣ್ ಸಿಂಗ್ ರಾಜ್ಯದ ವಾಸ್ತವ ಪರಿಸ್ಥಿತಿ ಗೊತ್ತಿಲ್ಲ. ಇಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ವಸೂಲಿಗಾಗಿ ಆಗಾಗ್ಗೆ ಭೇಟಿ ನೀಡುತ್ತಾರೆ. ಜೆಡಿಎಸ್ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.
ಮೇಕೆದಾಟು ಯೋಜನೆ ಆರಂಭಿಸಲಿ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯ ಆದೇಶ ಕುರಿತಂತೆ ಪ್ರತಿಕ್ರಿಯಿಸಿದ ಎಚ್ಡಿಕೆ, ಇದೇ ಕಾರಣಕ್ಕೆ ನಾವು ಮೇಕೆದಾಟು ಯೋಜನೆ ಆರಂಭಿಸಬೇಕು ಅನ್ನುತ್ತಿರೋದು.
ಸಮುದ್ರಕ್ಕೆ ಹರಿದುಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದು. ಇದನ್ನು ಕೇಂದ್ರ ಮತ್ತು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಪ್ರಾಧಿಕಾರದ ಮನವೊಲಿಸಬೇಕು.
ಎಲ್ಲಾ ರಾಜ್ಯಗಳನ್ನು ಸರಿಸಮಾನಾಗಿ ನೋಡಬೇಕು. ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕದ ಸಂಸದರಿಗೆ ಮೂಳೆ, ಎಲುಬು ಎರಡೂ ಇಲ್ಲ. ಅರುಣ್ ಸಿಂಗ್ ಸೂಟ್‌ಕೇಸ್ ತಗೊಂಡು ಹೋದ್ರೆ ಸಾಲದು. ಇಂತಹ ಸಮಸ್ಯೆಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಬಾಗಿಲು ದೊಡ್ಡದಿದೆ
ಜಿ.ಟಿ.ದೇವೇಗೌಡ ಪಕ್ಷ ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜೆಡಿಎಸ್ ಬಾಗಿಲು ದೊಡ್ಡದಾಗಿ ತೆರೆದಿದೆ. ಬರುವವರು ಬರಬಹುದು, ಹೋಗೋರು ಹೋಗಬಹುದು. ಎರಡು ವರ್ಷದ ಹಿಂದೆಯೇ ಪಕ್ಷದಿಂದ ದೂರ ಸರಿದಿದ್ದೇನೆ ಎಂದು ಅವರೇ ಹೇಳಿದ್ದಾರೆ. ಈಗ ಒಂದು ನೆಪ ಹೇಳಿ ಹೋಗೋಕೆ ಮುಂದಾಗಿದ್ದಾರೆ.
ದ್ರಾಕ್ಷಿ ಕೈಗೆಟುಕದಿದ್ದಾಗ ನರಿ ಹೇಳುವ ಕತೆಯಂತಾಗಿದೆ. ಈಗ ಹೊರಹೋಗುವುದಾದರೆ 2008ರಲ್ಲಿ ಯಾವ ಕಾರಣಕ್ಕಾಗಿ ಬಿಜೆಪಿಗೆ ಹೋದರು ಎಂದು ಶಾಸಕ ಜಿಟಿ ದೇವೇಗೌಡರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.