ವಿಜಯಸಾಕ್ಷಿ ಸುದ್ದಿ, ಗದಗ
ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಹೋರಾಟ ನಡೆಸುತ್ತಿದ್ದಾರೆ.
ಬೆಳಿಗ್ಗೆಯಿಂದ ಯಾವೊಂದು ಸರ್ಕಾರಿ ಬಸ್ ಗಳು ರಸ್ತೆಗಿಳಿದಿಲ್ಲ. ಬಸ್ ಗಳಿಲ್ಲದೇ ನಗರದ ಬಸ್ ನಿಲ್ದಾಣಗಳು ಬಣಗುಡುತ್ತಿವೆ. ಪ್ರಯಾಣಿಕರು, ರೋಗಿಗಳು ಊರಿಗೆ ಹೋಗಲು ಪರದಾಡುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಗೆ ಚಿಕಿತ್ಸೆಗಾಗಿ ತೆರಳಿದ್ದ ಕೊಪ್ಪಳ ಮೂಲದ ಮಂಜುನಾಥ್ ಎಂಬ ವ್ಯಕ್ತಿ ಇಂದು ಬೆಳಿಗ್ಗೆ ಕ್ರೂಸರ್ ಮೂಲಕ ಗದುಗಿಗೆ ಬಂದಿದ್ದಾನೆ. ಆದರೆ, ಮುಂದೆ ಕೊಪ್ಪಳ ಜಿಲ್ಲೆಯ ಕುಷ್ಟಗಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾನೆ.
ತಲೆ ನೋವು ಹಾಗೂ ಜ್ವರದಿಂದ ಬಳಲುತ್ತಿರುವ ಮಂಜುನಾಥ್ ಕಳೆದ ಎರಡ್ಮೂರು ಗಂಟೆಯಿಂದ ಬಸ್ ಗಾಗಿ ಕಾಯ್ದು ಬಳಿಕ ಆಟೋ ಮೂಲಕ ಹಳೆ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಖಾಸಗಿ ಬಸ್ ಮೂಲಕ ಕೊಪ್ಪಳಕ್ಕೆ ತೆರಳಿದ.