HomeKarnataka Newsಸಾರಿಗೆ ಮುಷ್ಕರವೂ..!ಯಾರಿಗೆ ನಷ್ಟವೂ..!!

ಸಾರಿಗೆ ಮುಷ್ಕರವೂ..!
ಯಾರಿಗೆ ನಷ್ಟವೂ..!!

Spread the love

ವಿಜಯಸಾಕ್ಷಿ ವಿಶೇಷ

ಒಂದು ಕಾಲದಲ್ಲಿ ‘ಭಾರತ್ ಬಂದ್’ ಎಂದರೆ ಜನಸಾಮಾನ್ಯರು ಬೆಚ್ಚಿ ಬೀಳುತ್ತಿದ್ದರು. ಒಂದು ದಿನದ ಬಂದ್‌ಗೇ ಸರಕಾರ ಹೆದರಿ ಕಂಗಾಲಾಗಿ ಬಿಡುತ್ತಿತ್ತು. ಬಂದ್‌ನಿಂದಾಗಿ ನಾಶ ನಷ್ಟಗಳಾದರೆ ಅದರ ದುಷ್ಪರಿಣಾಮವನ್ನು ಶ್ರೀಸಾಮಾನ್ಯನು ಅನುಭವಿಸಬೇಕಾಗುತ್ತದೆ. ಆತನ ಕೆಂಗಣ್ಣು ಸರಕಾರದ ಮೇಲೆ ಬೀಳುತ್ತದೆ. ಒಂದು ರೀತಿಯಲ್ಲಿ, ಜನಸಾಮಾನ್ಯರ ಬದುಕನ್ನು ಒತ್ತೆಯಿರಿಸಿಕೊಂಡು ಈ ಬಂದ್‌ಗಳು ನಡೆಯುತ್ತಿದ್ದವು. ಸರಕಾರವನ್ನು ಬೆದರಿಸಲು ಕಾರ್ಮಿಕ, ರೈತ ಸಂಘಟನೆಗಳು ಪ್ರಯೋಗಿಸುವ ಕಟ್ಟಕಡೆಯ ಅಸ್ತ್ರವಾಗಿತ್ತು ಈ ಬಂದ್. ಆದರೆ ಈಗ ಪರಿಸ್ಥಿತಿ ತಿರುವು ಮುರುವಾಗಿದೆ. ಜನಸಾಮಾನ್ಯರು ಒಂದೊಮ್ಮೆ ಪ್ರತಿಭಟನಾರ್ಥವಾಗಿ ನಡೆಸುತ್ತಿದ್ದ ಬಂದ್‌ನ್ನು ಸರಕಾರವೇ ಜನರ ಮೇಲೆ ಪ್ರಯೋಗಿಸುತ್ತಿದೆ. ಜೊತೆಗೆ ಈ ಬಂದ್‌ಗೆ ‘ಲಾಕ್‌ಡೌನ್’ ಎನ್ನುವ ಸುಂದರ ನಾಮಕರಣವನ್ನೂ ಮಾಡಿದೆ.

ಈ ಹಿಂದೆಲ್ಲ ಒಂದೆರಡು ದಿನ ಬಂದ್‌ಗಳು ನಡೆಯುತ್ತಿದ್ದರೆ, ಮೋದಿ ಸರಕಾರದ ನೇತೃತ್ವದಲ್ಲಿ ಎರಡು ತಿಂಗಳು ಭಾರತ ‘ಬಂದ್’ ಆಚರಿಸಿತು. ಲಾಕ್‌ಡೌನ್‌ನಿಂದ ದೇಶಕ್ಕಾಗಿರುವ ನಾಶ, ನಷ್ಟ, ಜನಸಾಮಾನ್ಯರ ಸಂಕಟಗಳು ಸರಕಾರವನ್ನು ಯಾವ ರೀತಿಯಲ್ಲೂ ತಾಕುತ್ತಿಲ್ಲ. ಲಾಕ್‌ಡೌನ್ ಎನ್ನುವುದು ಜನಸಾಮಾನ್ಯರಿಗಾಗಿ ನೀಡುತ್ತಿರುವ ಕೊಡುಗೆಯೇನೋ ಎನ್ನುವ ರೀತಿಯಲ್ಲಿ ಪದೇ ಪದೇ ‘ಲಾಕ್‌ಡೌನ್’ ಹೇರುವ ಬೆದರಿಕೆಯನ್ನು ಸರಕಾರವೇ ಒಡ್ಡುತ್ತಿದೆ. ಇಂತಹ ಸಂದರ್ಭದಲ್ಲಿ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ‘ಬಂದ್’ ಘೋಷಿಸಿದರೆ ಅದನ್ನು ಸರಕಾರ ಗಂಭೀರವಾಗಿ ಸ್ವೀಕರಿಸುತ್ತದೆಯೆ?. ಈ ಹಿಂದೆ ಎರಡು ಬಾರಿ ರೈತ ಸಂಘಟನೆಗಳು ಭಾರತ್ ಬಂದ್ ನಡೆಸಿದಾಗಲೂ ಇದೇ ನಡೆಯಿತು. ಈಗಾಗಲೇ ದೇಶ ಅಘೋಷಿತ ಬಂದ್ ಆಚರಿಸುತ್ತಿರುವುದರಿಂದ ರೈತ ಸಂಘಗಳ ಅಧಿಕೃತ ಬಂದ್‌ಗಳನ್ನು ಯಾರೂ ಗಮನಿಸಲೇ ಇಲ್ಲ. ಇವೆಲ್ಲದರ ನಡುವೆ, ಗಾಯಗಳ ಮೇಲೆ ಬರೆ ಎಳೆಯುವಂತೆ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಲಾಕ್‌ಡೌನ್‌ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಮಧ್ಯಮವರ್ಗ, ಈ ಸಾರಿಗೆ ಮುಷ್ಕರದಿಂದಾಗಿ ಮತ್ತೆ ಹೊಸ ಬಗೆಯ ಲಾಕ್‌ಡೌನ್‌ಗೆ ಸಿಲುಕಿಕೊಂಡಂತಾಗಿದೆ. ಮುಷ್ಕರದ ಪರಿಣಾಮವಾಗಿ ರಾಜ್ಯದೆಲ್ಲೆಡೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ರೈಲು ಮತ್ತು ಖಾಸಗಿ ವಾಹನಗಳಲ್ಲಿ ಹೆಚ್ಚಿದ ಒತ್ತಡ ಸುರಕ್ಷಿತ ಅಂತರವನ್ನು ನಗೆಪಾಟಲಿಗೀಡು ಮಾಡಿದೆ. ಕೊರೋನಾ ಕುರಿತ ಸರಕಾರದ ಎಲ್ಲಾ ಮುಂಜಾಗ್ರತೆಗಳನ್ನು ಈ ಮುಷ್ಕರ ವಿಫಲಗೊಳಿಸಿದೆ.

ಮುಷ್ಕರದ ಬಗ್ಗೆ ಸರಕಾರ ತಳೆದಿರುವ ಬಿಗಿ ನಿಲುವನ್ನು ಗಮನಿಸಿದರೆ ಈ ಸ್ಥಿತಿ ಇನ್ನೂ ಎರಡು-ಮೂರು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಗಳು ಕಾಣುತ್ತಿವೆ. ಸಾರಿಗೆ ನೌಕರರ ಬಹುತೇಕ ಬೇಡಿಕೆಗಳನ್ನು ಸರಕಾರ ಪರಿಗಣಿಸಿದೆಯಾದರೂ, ಅತಿ ಮುಖ್ಯ ಬೇಡಿಕೆಯಾಗಿರುವ ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಅವರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎನ್ನುವುದು ಇನ್ನೂ ನೆನಗುದಿಯಲ್ಲಿದೆ. ಸದ್ಯಕ್ಕಂತೂ ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಸರಕಾರದ ಬಳಿಯೂ ಸಕಾರಣಗಳಿವೆ. ರಾಜ್ಯ ಮಾತ್ರವಲ್ಲ, ಇಡೀ ದೇಶವೇ ಕೊರೋನನಂತರ ಆರ್ಥಿಕವಾಗಿ ಕುಸಿದು ಕೂತಿದೆ. ಪೆಟ್ರೋಲ್ ಬೆಲೆಯೇರಿಕೆ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ರಾಜ್ಯದ ಸ್ಥಿತಿ ಇನ್ನಷ್ಟು ದಯನೀಯವಾಗಿದೆ. ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಪರಿಹಾರವನ್ನು ನೀಡಲು ಕೇಂದ್ರ ಸತಾಯಿಸುತ್ತಿದೆ. ನೀಡಬೇಕಾದ ಅನುದಾನಗಳನ್ನೂ ಬಾಕಿ ಉಳಿಸಿದೆ.

ಕೇಂದ್ರಕ್ಕೆ ಒತ್ತಡ ಹೇರಿ, ರಾಜ್ಯದ ಜನರ ತೆರಿಗೆ ಹಣವನ್ನು ವಸೂಲಿ ಮಾಡಿಕೊಂಡು ಬರುವ ವ್ಯಕ್ತಿತ್ವ ಇರುವ ಒಬ್ಬನೇ ಒಬ್ಬ ಸಂಸದ ರಾಜ್ಯದಲ್ಲಿ ಇಲ್ಲ. ರಾಜ್ಯ ಬೊಕ್ಕಸ ಅಕ್ಷರಶಃ ಖಾಲಿಯಾಗಿದೆ. ಇಂತಹ ಸಂದರ್ಭದಲ್ಲಿ ಸಹಸ್ರಾರು ಕೋಟಿ ರೂಪಾಯಿ ಅಗತ್ಯಬೀಳುವ, ಬೇಡಿಕೆಯೊಂದನ್ನು ಮುಂದಿಟ್ಟು ಸಾರಿಗೆ ಕಾರ್ಮಿಕರು ಮುಷ್ಕರ ನಡೆಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ತಲೆಯೆತ್ತುತ್ತದೆ. ಆದರೆ ಇಂತಹದೊಂದು ಬೇಡಿಕೆ ತಲೆಯೆತ್ತಲು ಪರೋಕ್ಷ ಕಾರಣ ನಮ್ಮ ಸರಕಾರವೇ ಆಗಿದೆ. ತನ್ನ ಖಜಾನೆಯಲ್ಲಿ ಹಣವಿಲ್ಲ ಎಂದು ಹೇಳುವ ಸರಕಾರ, ಮಗದೊಂದೆಡೆ ತನ್ನ ರಾಜಕೀಯ ದುರುದ್ದೇಶಗಳಿಗಾಗಿ ಜನರ ತೆರಿಗೆಯ ಹಣವನ್ನು ಭಾರೀ ಪ್ರಮಾಣದಲ್ಲಿ ದುರುಪಯೋಗ ಪಡಿಸುತ್ತಿದೆ. ಯಾವುದೇ ಬೇಡಿಕೆಯಿಲ್ಲದೇ ಇದ್ದರೂ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಜಾತಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ, ಮಂಡಳಿಗಳನ್ನು ರಚಿಸಿ ಅವುಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತು. ಈ ಹಣ ಎಲ್ಲಿಂತ ಬಂತು? ಎಂದು ಸಾರಿಗೆ ಕಾರ್ಮಿಕರು ಕೇಳುತ್ತಿದ್ದಾರೆ. ಈ ಮೂರು ಜಾತಿಗಳು ಯಾವುದೇ ದುರ್ಬಲ ಸಮುದಾಯಕ್ಕೆ ಸೇರಿಲ್ಲ.

ರಾಜಕೀಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿ ಸಮರ್ಥವಾಗಿ ಪ್ರಾತಿನಿಧ್ಯಗಳನ್ನು ಈ ಜಾತಿಗಳು ಹೊಂದಿವೆ. ಹೀಗಿದ್ದರೂ, ಇವರಿಗಾಗಿ ಪ್ರತ್ಯೇಕ ನಿಗಮ, ಮಂಡಳಿ, ಪ್ರಾಧಿಕಾರವನ್ನು ರಚಿಸುವುದಕ್ಕೆ ಇರುವ ಕಾರಣಗಳೇನು? ಸಾರಿಗೆ ನೌಕರರ ಬೇಡಿಕೆ ಈಡೇರಿಸಿದ್ದೇ ಆಗಿದ್ದರೆ, ಆ ಸಂಸ್ಥೆಯೊಳಗಿರುವ ಎಲ್ಲ ಜಾತಿ, ಧರ್ಮಗಳ ಜನರಿಗೂ ಸವಲತ್ತು ಹಂಚಿ ಹೋಗುತ್ತಿತ್ತು. ಬೀದಿಯಲ್ಲಿ ಅತ್ತು ಕರೆಯುವ ಮಕ್ಕಳನ್ನು ಬೀದಿಯಲ್ಲೇ ಬಿಟ್ಟು, ಸುಖದ ಸುಪ್ಪತ್ತಿಗೆಯ ತೊಟ್ಟಿಲಲ್ಲಿ ನಿದ್ರಿಸುತ್ತಿರುವ ಮಕ್ಕಳನ್ನು ಎಚ್ಚರಿಸಿ ಅವುಗಳಿಗೆ ಹಾಲುಣಿಸುವ ಸರಕಾರದ ನೀತಿಗಳೇ ಕಾರ್ಮಿಕರನ್ನು ಕೆರಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ.

ಸರಕಾರ ಮೊತ್ತ ಮೊದಲು ರಾಜಕೀಯ ದುರುದ್ದೇಶಗಳನ್ನು ಇಟ್ಟುಕೊಂಡು ಸ್ಥಾಪಿಸಿರುವ ಜಾತಿ ಅಭಿವೃದ್ಧಿಗಾಗಿ ರಚಿಸಿದ ನಿಗಮ, ಮಂಡಳಿಗಳನ್ನು ಹಿಂಪಡೆದು, ಅದಕ್ಕಾಗಿ ಮೀಸಲಿಟ್ಟ ಹಣವನ್ನು ಈ ಕಾರ್ಮಿಕರಿಗಾಗಿ ಉಪಯೋಗಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ‘ಗೋಶಾಲೆಗಳು’ ಎಂಬ ಅನುಪಯುಕ್ತ ಯೋಜನೆಗಾಗಿ ರಾಜ್ಯ ಸರಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿಯನ್ನು ವ್ಯಯಿಸುತ್ತಿವೆ. ಉದ್ಯಮ ನಡೆಸುವುದು ಸರಕಾರದ ಕೆಲಸವಲ್ಲ ಎಂದು ಪ್ರಧಾನಿ ಒಂದೆಡೆ ಹೇಳಿದ್ದಾರೆ. ಹಾಗಾದರೆ, ಅನುಪಯುಕ್ತ ಗೋವುಗಳನ್ನು ಸಾಕುವುದು ಸರಕಾರದ ಕೆಲಸವೇ ಎಂದು ರೈತರು ಕೇಳುತ್ತಿದ್ದಾರೆ.

ಈ ಗೋಶಾಲೆಗಳು ರಚನೆಯಾಗುವ ಮೊದಲು ಗೋವುಗಳ ಮಾರಾಟದ ಹಕ್ಕುಗಳನ್ನು ರೈತರೇ ಹೊಂದಿದ್ದರು. ಅದರಿಂದ ಅವರಿಗೆ ಆರ್ಥಿಕವಾಗಿಯೂ ಲಾಭವಾಗುತ್ತಿತ್ತು. ಜೊತೆಗೆ ಸರಕಾರಕ್ಕೂ ಅವನ್ನು ಸಾಕುವ ಹೊಣೆಗಾರಿಕೆಗಳು ಇರಲಿಲ್ಲ. ಇದೀಗ ಸರಕಾರ ಗೋವು ಮಾರಾಟದ ಮೇಲೆ ನಿಯಂತ್ರಣ ಹೇರುವ ಮೂಲಕ, ಅನಗತ್ಯವಾಗಿ ಅನುಪಯುಕ್ತ ಗೋವುಗಳ ಹೊಣೆಯನ್ನು ಮೈಮೇಲೆ ಎಳೆದುಕೊಂಡಿದೆ. ಇದರಿಂದಾಗಿ ರೈತರ ಆದಾಯವನ್ನು ಸರಕಾರ ಕಿತ್ತುಕೊಂಡಿದೆ. ಇನ್ನೊಂದೆಡೆ, ಜನ ಸಾಮಾನ್ಯರ ತೆರಿಗೆಯನ್ನು ಈ ಗೋಶಾಲೆಗಳೆಂಬ ಪ್ರಹಸನಕ್ಕೆ ಚೆಲ್ಲುತ್ತಿದೆ. ಆದರೆ ಇದರಿಂದ ಸರಕಾರಕ್ಕೆ ಯಾವುದೇ ಆದಾಯ ಬರುತ್ತಿಲ್ಲ. ಗೋಶಾಲೆಗಳಿಗಾಗಿ ಬಿಡುಗಡೆ ಮಾಡಿರುವ ಹಣವನ್ನು ಕಪಟ ಸ್ವಾಮೀಜಿಗಳು, ನಕಲಿ ಗೋರಕ್ಷಕರು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಇಂತಹ ಎಲ್ಲ ಗೋಶಾಲೆಗಳನ್ನು ಕಿತ್ತು ಹಾಕಿ, ಅವುಗಳಿಗಾಗಿ ಮೀಸಲಿಟ್ಟ ಹಣವನ್ನು ತಮ್ಮ ಹಕ್ಕುಗಳನ್ನು ಕೇಳುತ್ತಿರುವ ಕಾರ್ಮಿಕರಿಗಾಗಿ ವ್ಯಯಿಸುವ ಅವಕಾಶ ಸರಕಾರಕ್ಕಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳೂ ಜನಸಾಮಾನ್ಯರ ಮೇಲೆ ಮುಷ್ಕರ ಬೀರುತ್ತಿರುವ ಪರಿಣಾಮವನ್ನು ಗಮನಿಸಬೇಕಾಗಿದೆ. ಸಾರಿಗೆ ಮುಷ್ಕರದ ಲಾಭವನ್ನು ಖಾಸಗಿ ಬಸ್ ಮಾಲಕರು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನೂ ಗಮನಿಸಬೇಕು. ಈಗಾಗಲೇ ಸರಕಾರ ಎಲ್ಲವನ್ನು ಖಾಸಗಿಯವರಿಗೆ ಒಪ್ಪಿಸಿ ಕೈತೊಳೆದುಕೊಳ್ಳಲು ಯತ್ನಿಸುತ್ತಿರುವಾಗ, ಕೊರೋನಾದಂತಹ ಸಂಕಟದ ಕಾಲದಲ್ಲಿ ಸಾರಿಗೆ ನೌಕರರ ಬಿಗಿ ನಿಲುವು ಅವರಿಗೇ ತಿರುಗುಬಾಣವಾಗಬಹುದು. ಮುಷ್ಕರಕ್ಕೆ ಜನರ ಸಹಕಾರವೂ ಅತ್ಯಗತ್ಯ. ಜನರ ಅನುಕಂಪವನ್ನು ಕಳೆದುಕೊಂಡ ಹೋರಾಟಗಳು ವಿಫಲವಾದದ್ದೇ ಹೆಚ್ಚು. ಆದುದರಿಂದ, ಹೋರಾಟವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಈ ಸಂಕಟ ಕಾಲದಲ್ಲಿ ಸರಕಾರ ಮತ್ತು ಕಾರ್ಮಿಕ ಸಂಘಟನೆಗಳು ಕೊಡುಕೊಳ್ಳುವಿಕೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳಬೇಕಾಗಿದೆ..!

ಕೆ.ಶಿವು.ಲಕ್ಕಣ್ಣವರ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!