
–ಬಸವರಾಜ ಕರುಗಲ್.
“ನಾನು ಯುದ್ಧ ಮಾಡೋಕೆ ಬಯಸಲ್ಲ, ತಡೆಯೋಕೆ ನೋಡ್ತಿನಿ.. ಒಂದು ವೇಳೆ ಯುದ್ಧ ಆದ್ರೆ ಗೆದ್ದೇ ಗೆಲ್ತಿನಿ”
ಸಿನಿಮಾ ಮುಗಿಯೊ ಸಮಯಕ್ಕೆ ರಾಕಿ ಭಾಯ್ ಹೇಳೋ ಖಡಕ್ ಡೈಲಾಗ್ ಇದು. ಈ ಡೈಲಾಗ್ ಮೂಲಕಾನೇ ಗೊತ್ತಾಗುತ್ತೆ, ರಾಕಿ ಭಾಯ್ಗೆ ಇರೊ ಕಾನ್ಫಿಡೆನ್ಸು, ಕಮಿಟ್ಮೆಂಟು, ಇಂಟಲಿಜೆನ್ಸು..
ಕೆಜಿಎಫ್ ಚಾಪ್ಟರ್-1ನ ಮುಂದುವರಿದ ಭಾಗ ಇದು ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಚಾಪ್ಟರ್-1ನಲ್ಲಿ ಆನಂದ್ ಇಂಗಳಗಿ ಪಾತ್ರದಲ್ಲಿ ಅನಂತನಾಗ್ ಕಥೆಯನ್ನ ಹೇಳ್ತಾ ಹೋಗಿದ್ರು. ಫಾರ್ ಎ ಚೇಂಜ್.. ಚಾಪ್ಟರ್-2ನಲ್ಲಿ ಅನಂತನಾಗ್ ಹಾಸಿಗೆ ಹಿಡಿದಿರೊ ಕಾರಣ ನೀಡಿ ಸನ್ ಆಫ್ ಇಂಗಳಗಿ ಪಾತ್ರದಲ್ಲಿ ಪ್ರಕಾಶ್ ರಾಜ್ ಕಥೆಯನ್ನ ಮುಂದುವರಸ್ತಾರೆ.
ಗರುಡನ ಅಧೀನದಲ್ಲಿ ಚಿನ್ನದ ಗಣಿ ಗರುಡನ ನಂತರ ಆತನ ತಮ್ಮನ ವಶಕ್ಕೆ ಹೋಗುತ್ತೆ ಅಂತ ಕೊಳ್ಳೇಬಾಕರು ಲೆಕ್ಕ ಹಾಕಿರ್ತಾರೆ. ಆದರೆ ರಾಕಿ ಭಾಯ್ ಗರುಡನ ಸಹೋದರನನ್ನು ಗರುಡ ಇರುವ ಜಾಗಕ್ಕೆ ಕಳಿಸಿ, ತಾನು ಒಡೆಯನಾಗಿ ಸುಲ್ತಾನ್ ಎನಿಸಿಕೊಳ್ಳುತ್ತಾನೆ.
ಸುಲ್ತಾನ್ಗಿರಿ ಕಸಿದುಕೊಳ್ಳಲು ಅಧೀರನ ಪಾತ್ರದಲ್ಲಿ ಬರುವ ಮುನ್ನಾಭಾಯ್ ಸಂಜಯದತ್ ರಾಕಿ ಭಾಯ್ ಎದೆಗೆ ಗುಂಡಿಟ್ಟು ನಡುಕ ಹುಟ್ಟಿಸುತ್ತಾರೆ.
ಪಕ್ಕಾ ಬಿಸಿನೆಸ್ಮ್ಯಾನ್ ಎನಿಸಿಕೊಂಡಿರೊ ರಾಕಿ ಭಾಯ್ ಅಧೀರನಂಥ ಅಧೀರನನ್ನೇ ಅಲ್ಲಾಡಿಸಿ ಬಿಡುತ್ತಾನೆ. ಅದು ಹೇಗೆ ಅನ್ನೋದನ್ನ ಸಿನಿಮಾದಲ್ಲೇ ನೋಡಿ ತಿಳ್ಕೋಬೇಕು.
ಚಾಪ್ಟರ್-1ನಲ್ಲಿ ಇದ್ದಂತೆ ಪ್ರೀತಿಸಿದ ಹುಡುಗಿ ಇದ್ದಾಳೆ, ಅಮ್ಮ ಹಾಗೂ ಅಮ್ಮನ ನೆನಪುಗಳಿವೆ. ಕಥೆ ಮುಂದುವರಿಸಲು ಪ್ರಶ್ನೆ ಕೇಳೋದಕ್ಕೆ ಮಾಳವಿಕಾ ಇದಾರೆ, ಮಧ್ಯ ಮಧ್ಯ ಕಚಗುಳಿ ಇಡಲು ಪ್ಯೂನ್ ಕಾಮಿಡಿ ಕಿಲಾಡಿಯ ಗೋವಿಂದು ಇದಾರೆ. ಮಧ್ಯಂತರದ ನಂತರ ಚಿತ್ರದಲ್ಲಿ ಬರುವ ಹಾಡುಗಳು ಲ್ಯಾಗ್ ಎನಿಸಿದರೂ ಪ್ರಧಾನಿ ಪಾತ್ರದ ರವೀನಾ ಎದುರು ಬರುವ ರಾಕಿ ಭಾಯ್ ಅಲ್ಲಿ ಹೇಳುವ ಡೈಲಾಗ್ಗಳು ಮತ್ತೇ ಗಮನ ಬೇರೆ ಕಡೆ ಸುಳಿಯದಂತೆ ಮಾಡುತ್ತವೆ.
ಪತ್ರಕರ್ತನೊಬ್ಬ ಕದ್ದು ಮುಚ್ಚಿ ರಾಕಿ ಭಾಯ್ ಸಾಮ್ರಾಜ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾಗ ಪತ್ರಕರ್ತನೇ ಸೆರೆಯಾದಾಗ, “ನನಗೆ ಇತಿಹಾಸದಲ್ಲಿ ನಂಬಿಕೆ ಇಲ್ಲ. ಅವರಿವರು ಹೇಳಿದ್ದೇ ಸತ್ಯ ಅಲ್ಲ, ಕಣ್ಣಾರೆ ನೋಡು, ಅನಿಸಿದ್ದನ್ನ ಬರಿ” ಅನ್ನೋ ಡೈಲಾಗ್ ಪರೋಕ್ಷವಾಗಿ ಕೆಲ ಮಾಧ್ಯಮಗಳನ್ನ ಉದ್ದೇಶಿಸಿ ಹೇಳಿದ್ದು ಅನ್ನೊ ವಿಚಾರ ಎಂಥವರಿಗಾದರೂ ಗೊತ್ತಾಗುತ್ತೆ.
ಸಂಜಯದತ್, ರವೀನಾ ಟಂಡನ್ ಚಿತ್ರದ ಹೈಲೈಟ್. ರಾಖಿ ಭಾಯ್ ಆಗಿರೊ ಯಶ್ ಚಿತ್ರದ ಹೈಸ್ಪಿಡ್ ಎನರ್ಜಿ. ಪ್ರಕಾಶ್ ರಾಜ್, ಮಾಳವಿಕಾ, ಅಚ್ಯುತ್ರಾವ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಶಿಗಟ್ಟಲೆ ಇರುವ ವಿಲನ್ಗಳು ಪಾತ್ರಗಳಿಗೆ ಹೊಂದಿಕೆಯಾಗಿದ್ದಾರೆ. ರವಿ ಬಸ್ರೂರ್ ಸಂಗೀತದ ಹಾಡುಗಳು ಒಂದು ರೇಂಜ್ಗೆ ಒಕೆ, ಆದ್ರೆ ಅವರು ನೀಡಿರುವ ಬ್ಯಾಕ್ ಗ್ರೌಂಡ್ ಮ್ಯೂಜಿಕ್ ಎಕ್ಸಟ್ರಾರ್ಡಿನರಿ. ಭುವನ್ ಛಾಯಾಗ್ರಹಣ ಇಡೀ ಸಿನಿಮಾದ ಅತಿ ದೊಡ್ಡ ಪ್ಲಸ್ ಪಾಯಿಂಟ್. ಜಿಂದಾಲ್ ಸೇರಿದಂತೆ ಇರುವ ಹಲವು ಲೋಕೇಷನ್ಗಳು ಅತ್ಯದ್ಭುತ. ಹೊಂಬಾಳೆ ಪ್ರೊಡಕ್ಷನ್ನ ವಿಜಯ ಕಿರಂಗದೂರ ಕೋಟಿಗಟ್ಟಲೆ ಬಂಡವಾಳ ಹಾಕಿ ಅದರ ಮೂರ್ನಾಲ್ಕು ಪಟ್ಟು ಬಾಚಿಕೊಳ್ಳುವ ಲಕ್ಷಣಗಳಿವೆ.
ಅಧೀರ ಏನಾದ? ರಾಕಿಭಾಯ್ ನಿರ್ನಾಮಕ್ಕೆ ಕಂಕಣಬದ್ಧವಾಗಿದ್ದ ಪ್ರಧಾನಿ (ರವೀನಾ ಟಂಡನ್) ನಿರ್ಧಾರ ಏನಾಯ್ತು? ವಿಶ್ವದ ಚಿನ್ನವನ್ನೆಲ್ಲ ಸಂಗ್ರಹಿಸಿದ ರಾಖಿ ಭಾಯ್ ಮುಂದೆ ಏನಾದ? ಇವುಗಳನ್ನ ತಿಳ್ಕೊಬೇಕಾದರೆ ಕೆಜಿಎಫ್-2 ನೋಡ್ಲೇಬೇಕು.
ಮೇಲ್ನೋಟಕ್ಕಿದು ಗ್ಯಾಂಗ್ಸ್ಟರ್ ಸಿನಿಮಾ ಅನ್ಸುತ್ತೆ ನಿಜ. ಗ್ಯಾಂಗ್ ವಾರ್ ಜೊತೆ ಜೊತೆಗೆ ಅಮ್ಮನ ಆಸೆ ಈಡೇರಿಸುವ ಮುದ್ದು ಮಗನ, ಸಾಮಾನ್ಯರ ಪಾಲಿನ ಮನುಷ್ಯರೂಪದ ದೇವರನ್ನು ಹೊಂದಿರುವ ಚಿನ್ನದಂಥ ಕತೆ ಕೆಜಿಎಫ್-2.