ವಿಜಯಸಾಕ್ಷಿ ಸುದ್ದಿ, ಗದಗ
ಚುನಾವಣೆಯ ಹೊಸ್ತಿಲ್ಲಲ್ಲಿ ಜಿಲ್ಲೆಯಲ್ಲಿ ಚುನಾವಣೆಯ ಬಹಿಷ್ಕಾರದ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಮೊನ್ನೆಯಷ್ಟೇ ಜಿಲ್ಲೆಯ ನೀಲಗುಂದ ಗ್ರಾಮದಲ್ಲಿ ಚುನಾವಣೆ ಬಹಿಷ್ಕರಿಸಿರುವ ಬೆನ್ನಲ್ಲೇ ಕೊಣ್ಣೂರು ಗ್ರಾಮದಲ್ಲೂ ಚುನಾವಣಾ ಬಹಿಷ್ಕಾರದ ಧ್ವನಿ ಮೊಳಗುತ್ತಿದೆ.
ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಪ್ರವಾಹಪೀಡಿತ ಸಂತ್ರಸ್ತರು ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.
ಕಳೆದ ಆಗಷ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿದಿದ್ದರ ಪರಿಣಾಮವಾಗಿ ಕೊಣ್ಣೂರ ಗ್ರಾಮದೊಳಗೆ ನೀರು ನುಗ್ಗಿ ಸುಮಾರು 200 ಜನರು ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.
ಆ ಪೈಕಿ ಸುಮಾರು 170 ಜನರನ್ನು ನೆರೆ ಸಂತ್ರಸ್ತರೆಂದು ಗುರುತಿಸಿ ಅಧಿಕಾರಿಗಳು ಎ,ಬಿ,ಸಿ ಹಾಗೂ ಡಿ ಗ್ರೇಡ್ ನಲ್ಲಿ ಸರ್ವೆ ಮಾಡಿ ಪರಿಹಾರ ಘೋಷಿಸಿದ್ದರು. ಅಲ್ಲದೇ, ಸಂತ್ರಸ್ತರಿಗೆ ಮನೆ ಬಾಡಿಗೆಗೆ ಅಂತಾ ಐದು ತಿಂಗಳ ಅವಧಿಯವರೆಗೆ ಸುಮಾರು 50 ಸಾವಿರ ರೂ. ಕೊಡುವ ಭರವಸೆ ನೀಡಿದ್ದರು. ಆದರೆ, ಇದರೊಳಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ.
ಸಂಪೂರ್ಣ ಮನೆ ಬೀಳದ ಕೆಲವರಿಗೆ ‘ಎ’ ಗ್ರೇಡ್ ನಲ್ಲಿ ಪರಿಹಾರ ನೀಡಿದ್ದಾರೆ. ಪ್ರಭಾವಿಗಳಿಗಷ್ಟೇ ಮನೆ ಬಾಡಿಗೆ ಹಣ ಹಾಕಿದ್ದಾರೆ. ಇನ್ನುಳಿದವರಿಗೆ ಬಾಡಿಗೆ ಹಣ ಮತ್ತು ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳು
ತಾರತಮ್ಯ ಮಾಡದೇ ಸಂತ್ರಸ್ತರಿಗೆ ‘ಎ’ ಗ್ರೇಡ್ ನಲ್ಲಿ ಪರಿಹಾರ ಮತ್ತು ಮನೆ ಬಾಡಿಗೆಗೆ ಹಣ ನೀಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಕೊಣ್ಣೂರ ಗ್ರಾಮದ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಯಲ್ಲಪ್ಪ ಕುಂಬಾರ, ಸಿದ್ದಪ್ಪ ಕುಂಬಾರ, ಹನಮಂತ ಕುಂಬಾರ, ಗುರುಲಿಂಗಪ್ಪ ಕುಂಬಾರ, ಮಂಜುನಾಥ್ ಕುಂಬಾರ, ಮಲ್ಲಪ್ಪ ಕುಂಬಾರ, ವಿಜಯ್ ಕುಂಬಾರ, ದೊಡ್ಡಕ್ಕ ರಾಜನಾಳ, ಭೀಮಪ್ಪ ರಾಜನಾಳ, ಸುವರ್ಣ ದಿವಟರ, ಕೃಷ್ಣೇಗೌಡ ಮುಳಗುಂದ, ರಿಯಾಜ್ ಮನಿಯಾರ ಸೇರಿದಂತೆ ಹಲವಾರು ಸಂತ್ರಸ್ತರು ಇದ್ದರು.