ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ಬೆಟಗೇರಿ ಅವಳಿ ನಗರದಲ್ಲಿ ಸಂಚಲನ ಸೃಷ್ಟಿಸಿರುವ ಆದರ್ಶ ನಗರದ ನಿವಾಸಿ ಸಂತೋಷ (ಕರಿಕಿಕಟ್ಟಿ) ಸಾವಿನ ಪ್ರಕರಣಕ್ಕೆಈಗ ಹೊಸ ತಿರುವು ಸಿಕ್ಕಿದೆ. ಪೊಲೀಸರು ಕೊಟ್ಟ ಹೊಡೆತವೇ ಸಂತೋಷ ಸಾವಿಗೆ ಕಾರಣ ಎನ್ನುವುದಕ್ಕೆ ಪುಷ್ಟಿ ನೀಡುವಂಥ ಎರಡು ಆಡಿಯೋ ಕ್ಲಿಪ್ಪಿಂಗ್ (ಫೋನ್ ಸಂಭಾಷಣೆ) ವಿಜಯಸಾಕ್ಷಿ'ಗೆ ಲಭ್ಯವಾಗಿದ್ದು, ಸಾವಿನ ಬಗ್ಗೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.
ಇದನ್ನೂ ಓದಿ ‘ಪೊಲೀಸ್ ಸ್ಟೇಶನ್’ಗೆ ಹೋದ ಮಗ, ಮನೆಗೆ ಹೆಣವಾಗಿ ಬಂದ್ನೋ ಎಪ್ಪಾ!’ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ತಾಯಿ
ಮೃತ ಸಂತೋಷ ತನ್ನ ಆಪ್ತನ ಜೊತೆ ನಡೆಸಿದ್ದೆನ್ನಲಾಗುತ್ತಿರುವ ಆಡಿಯೋ ಕ್ಲಿಪಿಂಗ್ ಪೊಲೀಸರತ್ತ ಬೊಟ್ಟು ಮಾಡಿ ತೋರಿಸಿದಂತಿದೆ.
ಸಾಯುವುದಕ್ಕೂ ಮುನ್ನ ಆಪ್ತರೊಬ್ಬರ ಜೊತೆ ಮಾತನಾಡಿರುವ ಸಂಭಾಷಣೆಯಲ್ಲಿ ಪೊಲೀಸರು ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಪೊಲೀಸರು ತುಂಬಾ ಹೊಡೆದ್ರು! ಹೊಡೆದಿದ್ದಕ್ಕೆ ಎದೆ ನೋಯಿಸುತ್ತಿದೆ. ಸ್ಟೇಶನ್ ಕಟ್ಟಿ ಮೇಲೆ ಮಲಕೊಂಡಿದ್ದೀನಿ. ದವಾಖಾನೆಗೆ ಹೋಗಬೇಕ್ರಿ. ಯಾರಾದ್ರೂ ಇದ್ರೆ ಕಳುಹಿಸಿರಿ. ಬಹಳ ಸಮಸ್ಯೆ ಆಗ್ತಿದೆ ರೀ. ಮಾತಾಡೋಕೆ ಆಗ್ತಿಲ್ರಿ’ ಎಂದು ಸಂತೋಷ ನರಳಾಟದ ಮಾತುಗಳು ಪೊಲೀಸರು ನಡೆಸಿದ ಕ್ರೌರ್ಯಕ್ಕೆ ಉದಾಹರಣೆಯಾಗಿದೆ.
ಕೋಲು ತಗೊಂಡು ಹೊಡೆದಿದ್ದಾರೆ
ಕರ್ತವ್ಯದ ಮೇಲಿರುವ ಪಿಸಿಗಳು ಕೋಲು ತಗೊಂಡು ಹೊಡೆದಿದ್ದಾರೆ. ಅವ್ರಿಗೆ ಮಾತಾಡೋಕೆ ಫೋನ್ ಕೊಟ್ರೆ ವಾಪಾಸ್ ಕೊಡೋದಿಲ್ಲ ರೀ ಅವ್ರು. ಏನ್ ಮಾಡ್ಬೇಕು ಅಂತಾ ಗೊತ್ತಾಗುತ್ತಿಲ್ಲ. ಅವರು (ಕಬ್ಜಾದಾರರು) ಇನ್ನೂ ದೂರು ಕೊಡೋಕೆ ಬರ್ತಿದ್ದಾರೆ, ಅಷ್ಟರಲ್ಲೇ ಪೊಲೀಸರು ಹೊಡೆದಿದ್ದಾರೆ.
ಕೈ, ಕಾಲಿಗೆ ಹೊಡೆದಿದ್ದಾರೆ. ಅವರು ಹೊಡೆದ ರಭಸಕ್ಕೆ ಕೈ ನೋವಾಗಿದೆ. ದಯವಿಟ್ಟು ಈಗಲೇ ಬಂದು ಬಿಡಿ ಸರ್' ಅಂತಾ ಸಂತೋಷ ತನ್ನ ಆಪ್ತರೆದುರು ಅಸಹಾಯಕತೆ ತೋಡಿಕೊಂಡಿದ್ದಾನೆ. ಆಡಿಯೋ ಲಭ್ಯ: ಹೀಗೆ ಆಪ್ತರ ಜೊತೆ ಅಂದು ಅಮವಾಸ್ಯೆ ದಿನ ಅ.4 ರಂದು ಮಾತಾಡಿರುವ ಎರಡು
ವಿಜಯಸಾಕ್ಷಿ’ಗೆ ಲಭ್ಯವಾಗಿದೆ. ಆದರೂ ಪೊಲೀಸ್ ದಾಖಲೆಗಳ ಪ್ರಕಾರ ಸಂತೋಷ್ ಹೊಡೆತದಿಂದ ಸತ್ತಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದೇ ದಾಖಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರೂ, ಇದು ಲಾಕಪ್ ಡೆತ್ ಅಲ್ಲ. ಸಂತೋಷ ಪೊಲೀಸ್ ಠಾಣೆಗೆ ಬಂದಾಗ ಮೂರ್ಚೆ ಬಂದು ಬಿದ್ದಿದ್ದಾನೆ. ನಮ್ಮವರೇ (ಪೊಲೀಸರು) ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ಉತ್ತರ ನೀಡುತ್ತಿದ್ದಾರೆ.
ಆದರೆ, ಸಂತೋಷನದ್ದೇ ಧ್ವನಿ ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ಕೇಳಿದಾಗಲೂ ಎಸ್ಪಿ ಶಿವಪ್ರಕಾಶ್ ದೇವರಾಜು ಅವರಿಗೆ ಸಂತೋಷ ಸಾವಿನ ಬಗ್ಗೆ ಅನುಮಾನ ಮೂಡದಿರುವುದು ಅಚ್ಚರಿ ಮೂಡಿಸಿದೆ.
ಎಲ್ಲ ಗೊತ್ತಿದ್ದೂ ಸುಮ್ಮನೆ ಇರುವ ಕೆಲವು ಪೊಲೀಸ್ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಿ ಪೊಲೀಸರನ್ನು ರಕ್ಷಿಸುವ ದೊಡ್ಡ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವ ಸಂಶಯವೂ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿದೆ.
ಸದ್ಯ ಸಂತೋಷನದ್ದೇ ಎನ್ನಲಾದ ಆಡಿಯೋ ಸಾಕಷ್ಟು ಸದ್ದು ಮಾಡುತ್ತಿದ್ದು, ಸಂತೋಷನದ್ದು ಲಾಕಪ್ ಡೆತ್ತೋ..? ಮೂರ್ಚೆ ರೋಗವೋ..? ಹೃದಯಾಘಾತವೋ..? ಎಂಬ ಗದಗ-ಬೆಟಗೇರಿ ಅವಳಿ ನಗರದ ಜನರ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ಸ್ಪಷ್ಟನೆ ನೀಡಬೇಕಿದೆ.
ಎದೆ ನೋಯ್ತೈತಿ…
ಆಪ್ತರಿಗೆ ಎರಡನೇ ಬಾರಿ ಕರೆ ಮಾಡಿದ ಸಂತೋಷದ ಧ್ವನಿಯಲ್ಲಿ ನೋವು ಸ್ಪಷ್ಟವಾಗಿ ಅರಿವಿಗೆ ಬರುವಂತಿದೆ. ನರಳುತ್ತ ಕರೆ ಮಾಡಿರುವ ಆತ, `… ಹೊಡದ್ರು, ಎದೆ ನೋಯ್ತೈತಿ, ಸ್ಟೇಷನ್ ಕಟ್ಟಿ ಮ್ಯಾಲೆ ಮಲ್ಕೊಂಡೀನಿ. ದವಾಖಾನಿಗೆ ಹೋಗ್ಬೇಕು… ಲೋಕಲ್ ಯಾರಾದ್ರೂ ಇದ್ರೆ ಕಳಿಸು ಮಾರಾಯಾ… ಅಲ್ರೀ… ಮಾತಾಡೋಕೆ ಆಗವಲ್ತು ರೀ…’ ಎಂದು ಅಸಹಾಯಕತೆ ತೋಡಿಕೊಂಡಿದ್ದಾನೆ.