//ಬಡವ ರಾಸ್ಕಲ್
ಸಿನಿಮಾ ವಿಮರ್ಶೆ// ಮಧ್ಯಮ ವರ್ಗದ ಹುಡುಗನ ಕಥೆ-ವ್ಯಥೆ

0
Spread the love

Advertisement

ಬಸವರಾಜ ಕರುಗಲ್.
ಬಡವರ ಮಕ್ಕಳನ್ನ ಹೀರೋ ಆಗೋಕೆ ಎಲ್ರಪ್ಪಾ ಬಿಡ್ತಿರಾ? ಹಿಂದೆಯಿಂದಾನೇ ಹೊಡೆದು ಬಿಡ್ತಿರಲ್ಲ ಎನ್ನುವ ಜಬರ್‌ದಸ್ತ್ ಡೈಲಾಗ್, ಫೈಟ್ ಜೊತೆ ಎಂಟ್ರಿ ಕೊಡೊ ನಟ ರಾಕ್ಷಸ, ಡಾಲಿ ಧನಂಜಯ್ ಇಡೀ ಸಿನಿಮಾದುದ್ದಕ್ಕೂ ನಗಸ್ತಾರೆ, ಅಳಸ್ತಾರೆ. ಬಡವ ರಾಸ್ಕಲ್ ಮಧ್ಯಮ ವರ್ಗದ ಹುಡುಗನ ಪ್ರೀತಿಯ ಕಥೆ ಮತ್ತು ವ್ಯಥೆ.

ಕಚಗುಳಿ, ಸೆಂಟೆಮೆಂಟ್ ಇರದಿದ್ದರೆ ಈ ಸಿನಿಮಾ ಕಥೆ ಮಾಮೂಲಿ ಲವ್ ಸ್ಟೋರಿ ಥರಾ ಆಗಿ ಬಿಡುವ ಅಪಾಯ ಇತ್ತು. ನಿರ್ದೇಶಕ ಶಂಕರ್ ಗುರು ಸಿನಿಮಾನ ಅಪಾಯದ ಅಂಚಿನಿಂದ ಮೇಲೆತ್ತಿ, ಮಧ್ಯಮ ವರ್ಗದ ಮನೆಯಲ್ಲಿ‌ ನಿತ್ಯ ನಡೆಯುವ ಎಳೆಯನ್ನ ಹೆಣೆದು ಉಪಾಯದಿಂದ ಪ್ರೇಕ್ಷಕರನ್ನು ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಇಲ್ಲಿ ಸೀಟಿನಂಚಿಗೆ ಕುಳಿತು ನೋಡುವ ದೃಶ್ಯಗಳಿಲ್ಲ, ಆದರೆ ಸೀಟಿಗೊರಗಿ ನಕ್ಕು ನಲಿಯುವ ದೃಶ್ಯಗಳಿಗಂತು‌ ಕೊರತೆ ಇಲ್ಲ.

ಶ್ರೀಮಂತ ಮನೆತನದ ಹುಡುಗಿಗೂ ಆಟೋ ಡ್ರೈವರ್ ಮಗನಿಗೂ ಲವ್ವು. ಒಂದು ಸಣ್ಣ ಕಾರಣಕ್ಕೆ ಬ್ರೇಕಪ್ಪು. ಕಾರಣ ತಿಳ್ಕೊಬೇಕಂದ್ರೆ ಬಡವ ರಾಸ್ಕಲ್‌ನನ್ನ ಥೇಟರ್‌ನಲ್ಲೇ ನೋಡಬೇಕು. ಕ್ಲೈಮಾಕ್ಸ್ ಹೊರತುಪಡಿಸಿ ಇಡೀ ಸಿನಿಮಾ ಫ್ಲ್ಯಾಶ್‌ಬ್ಯಾಕ್‌ನಲ್ಲಿದ್ದು, ಟ್ವಿಸ್ಟ್ ಕೊಡುವ, ನಗಿಸುವ, ಅಳಿಸುವ ಫ್ಲ್ಯಾಶ್‌ಬ್ಯಾಕ್‌ನಲ್ಲೇ ಕಥೆನ ಹೇಳ್ತಾ ಹೋಗಿರೋದು ಕನ್ನಡದ ಪ್ರೇಕ್ಷಕರಿಗೆ ಹೊಸತೇನಲ್ಲವಾದರೂ, ಸವಕಲು ಅನ್ನಿಸದ ಹಾಗೆ ಬಡವ ರಾಸ್ಕಲ್ ನೋಡಿಸ್ಕೊಂಡು ಹೋಗ್ತಾನೆ.

ಸಾಯಿಕುಮಾರ್ ಅಂತ ಹೆಸರು ಇಟ್ಕೊಂಡು ಒಂದೇ ಒಂದು ಡೈಲಾಗ್ ಇಲ್ವಲ್ಲೊ..!, ನರಕಕ್ಕೆ ಕಳಿಸಿದ್ರೂ ವಂಡರ್‌ಲಾ ಮಾಡ್ಕೊಂಡ್ ಬಿಡ್ತಾರೆ..ಹೀಗೆ ಇಂಥ
ಗಟ್ಟಿಯಾದ, ಕಚಗುಳಿ ಇಡುವ ಮಾತುಗಳು, ಮಾಸ್, ಅಲ್ಲಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಚಿತ್ರದ ಓಟಕ್ಕೆ ಪೂರಕವಾಗಿವೆ. ವಾಸುಕಿ ವೈಭವ್ ಸಂಗೀತದಲ್ಲಿ ಮೂಡಿ ಬಂದಿರೊ “ಉಡುಪಿ ಹೋಟಲು, ಮೂಲೆ ಟೇಬಲು” ರೋಮ್ಯಾಂಟಿಕ್ ಆಗಿಯೂ ಇಷ್ಟ ಆಗುತ್ತದೆ. ಉಳಿದ ಹಾಡುಗಳಿಗೂ ಗುನುಗುನಿಸುವ ಗುಣ ಇದೆ. ಛಾಯಾಗ್ರಾಹಕ ಪ್ರೀತ್ ಜಯರಾಮನ್ ಸಿನಿಮಾ ರಿಚ್ ಆಗಿ ಮೂಡಿ ಬರುವಂತೆ ಶ್ರಮಿಸಿದ್ದು ಎದ್ದು ಕಾಣುತ್ತದೆ. ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಲೇ ಸಿನಿಮಾ ನಿರ್ದೇಶಿಸುವ ಕನಸು ಕಂಡಿದ್ದ ಶಂಕರ ಗುರು ಮೊದಲ ಪ್ರಯತ್ನದಲ್ಲೇ ಸಿಕ್ಸರ್ ಹೊಡೆದಿದ್ದಾರೆ. ಆದರೆ ಈ ಸಿಕ್ಸರ್ ಚಿತ್ರತಂಡಕ್ಕೆ ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತೆ ಕಾದು ನೋಡಬೇಕು.

ರಂಗಾಯಣ ರಘು ಮತ್ತು ತಾರಾ ಮಧ್ಯಮ ವರ್ಗದ ದಂಪತಿಯಾಗಿ ಅಭಿನಯದಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ. ಬಡವ ರಾಸ್ಕಲ್ ಮೂಲಕ ನಟ ರಾಕ್ಷಸನಾಗಿರೊ ಡಾಲಿ ಧನಂಜಯ್ ಪಾತ್ರಕ್ಕೆ ಜೀವ ತುಂಬಿದ್ದು, ಉಳಿದ ಕಲಾವಿದರು ಸ್ಕ್ರೀನ್‌ನಲ್ಲಿ ಸ್ಪೇಸ್ ಕೊಟ್ಟಿದ್ದಾರೆ. ನಟರಾಗಿ ಸರ್ಕಸ್ ಮಾಡಿರೊ ಡಾಲಿ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸ್ಪರ್ಶ ರೇಖಾ ಮೊದಲ ಬಾರಿಗೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಕ್ಕಟ್‌ನ ನಾಗಭೂಷಣ್ ನಾಯಕನ ಗೆಳೆಯನಾಗಿ ಕಚಗುಳಿ ಇಡುತ್ತಲೇ ಇಷ್ಟವಾಗುತ್ತಾರೆ. ಕಾಮಿಡಿ ಆ್ಯಕ್ಟರ್ ಚೇರ್‌ಗೆ ಟವಲ್ ಹಾಕಿ ಮೀಸಲಿರಿಸಿದ್ದಾರೆ.

ಈ ವಾರ ಕನ್ನಡದಲ್ಲೇ ಮೂರ್ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ. ಅವುಗಳಲ್ಲಿ ಬಡವ ರಾಸ್ಕಲ್ ಸಿನಿಮಾ ನೋಡಿದರೆ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅನ್ನಬಹುದು, ಆದರೆ ಪೈಸಾ ವಸೂಲ್ ಸಿನಿಮಾ ಅಂತ ಹೇಳೋದು ಕೊಂಚ ಕಷ್ಟಾನೇ..!

ರೇಟಿಂಗ್: ***


Spread the love

LEAVE A REPLY

Please enter your comment!
Please enter your name here