ಬಡ್ಡಿ ವ್ಯವಹಾರ ಕಲಿಸಿದಾತಗೇ ಮುಹೂರ್ತವಿಟ್ಟ ರೌಡಿ ಶೀಟರ್! ಗುರುವಿಗೇ ಗುನ್ನ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಇನ್ನೆರಡು ದಿನಗಳಲ್ಲಿ ಮದುವೆ ನಿಶ್ಚಯವಾಗಬೇಕಿದ್ದ ಯುವಕನಿಗೆ ಮನಬಂದಂತೆ ಚುಚ್ಚಿದ ದುಷ್ಕರ್ಮಿಗಳು

ಹೆಣ್ಣು… ಹೊನ್ನು…ಮಣ್ಣು… ಇದು ಯಾವಾಗ ಬೇಕಾದರೂ ಮನುಷ್ಯನನ್ನು ಬದಲಿಸಬಹುದು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗೆಳೆಯ, ಗೆಳತಿ ಹತ್ತಿರವಾಗಬಹುದು ಅಥವಾ ದೂರಾಗಬಹುದು. ಯಾರನ್ನಾದರೂ ಪ್ರೀತಿಸಬಹುದು ಅಥವಾ ದ್ವೇಷವನ್ನೂ ಮಾಡಬಹುದು. ಇದಕ್ಕೆ ಸಾಕ್ಷಿಯಾಗುವಂತಹ ಘಟನೆ ಗದಗ ನಗರದಲ್ಲಿ ನಡೆದಿದೆ.

ಇಬ್ಬರೂ ರೌಡಿ ಶೀಟರ್‌ಗಳು. ಕೊಲೆಯಾದ ಯುವಕ ಮುತ್ತು ಅಲಿಯಾಸ್ ಗುಂಡಪ್ಪ ಚಲವಾದಿ ಒಂದಿಷ್ಟು ಪಳಗಿದ ಆಸಾಮಿ. ಕೊಲೆ ಆರೋಪ ಹೊತ್ತ ಯುವಕ ಇತ್ತೀಚೆಗೆ ಕಣ್ಣು ಬಿಟ್ಟಾತ. ಸಣ್ಣ ಪುಟ್ಟ ಜಗಳ ಮಾಡಿಕೊಂಡು ಹವಾ ಮೆಂಟೇನ್ ಮಾಡಿಕೊಂಡಿದ್ದ. ಒಂದಿಷ್ಟು ದಿನ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಆಮೇಲೆ ಮುತ್ತು ಚಲವಾದಿ ಮೂಲಕ ಬಡ್ಡಿ ವ್ಯವಹಾರ ಶುರು ಹಚಗೊಂಡ ಯುವಕ, ಮುತ್ತು ಚಲವಾದಿ ಮೂಲಕವೇ ಜನರಿಗೆ ಮೀಟರ್ ಬಡ್ಡಿಗೆ ಹಣ ಕೊಡುತ್ತಾ ಹೋದ.

ಇದನ್ನೂ ಓದಿ ಹಣ್ಣಿನ ವ್ಯಾಪಾರಿಯ ಭೀಕರ ಕೊಲೆ; ಪಾರ್ಟಿಗೆ ಕರೆದವರೇ ಕೊಲೆ ಮಾಡಿದ್ರಾ?

ಇಡೀ ಮಾರುಕಟ್ಟೆಯ ಜನರಿಗೆ ಪರಿಚಯ ಮಾಡಿಸಿಕೊಟ್ಟ ಮುತ್ತು ಚಲವಾದಿ ಒಂದು ರೀತಿಯಲ್ಲಿ ಕೊಲೆ ಆರೋಪ ಹೊತ್ತ ಯುವಕ ಅಲಿಯಾಸ್ ( ೨೨೦-)ಗೆ ಬದುಕೋಕೆ ದಾರಿತೋರಿಸಿದ ಗುರುವಾಗಿದ್ದ.

ಆತ್ಮೀಯ ಮಿತ್ರರು

ಕಳೆದ ೧೦-೧೨ ವರ್ಷಗಳಿಂದ ಮುತ್ತು ಚಲವಾದಿ ಹಾಗೂ ಕೊಲೆ ಆರೋಪ ಹೊತ್ತ ಯುವಕ ಆತ್ಮೀಯ ಗೆಳೆಯರಾಗಿದ್ದವರು. ಅದ್ಯಾಕೋ ಇಬ್ಬರ ನಡುವೆ ಒಂದು ವರ್ಷದಿಂದ ವೈಮನಸ್ಸು ಉಂಟಾಗಿದೆ. ಆಗಾಗ ಇಬ್ಬರ ನಡುವೆ ಜಗಳವೂ ಆಗಿದೆ. ಕಾರಣ ಹಣಕಾಸಿನ ವಿಚಾರವೋ ಅಥವಾ ಹೆಣ್ಣಿನ ವಿಚಾರವೋ ಗೊತ್ತಿಲ್ಲ. ಇದೆಲ್ಲ ಇಬ್ಬರನ್ನೂ ಚೆನ್ನಾಗಿ ಬಲ್ಲವರೇ ಬಾಯಿ ಬಿಟ್ಟರೆ ಮಾತ್ರ ಕೊಲೆಯ ಕಾರಣ ಹೊರಬೀಳಲಿದೆ.

ಕೊಲೆಗೆ ಸ್ಕೆಚ್ ಇದೇಮೊದಲಲ್ಲ

ಆರು ತಿಂಗಳ ಹಿಂದೆ ಕಾರ್ಯಕ್ರಮ ಒಂದಕ್ಕೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಕುಡಿದುಕುಪ್ಪಳಿಸಿದ್ದರು.ಅಂದೇ ಕೊಲೆಗೆ ಪ್ರಯತ್ನ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಅದೃಷ್ಟ ಮುತ್ತು ಚಲವಾದಿಯ ಕೈ ಹಿಡಿದಿತ್ತು. ಪಾರಾಗಿದ್ದ.

ಆರೋಪಿಯ ಹಿನ್ನೆಲೆ

ಮುತ್ತು ಚಲವಾದಿಯ ಕೊಲೆ ಆರೋಪ ಹೊತ್ತಿರುವ ಪ್ರಮುಖ ಆರೋಪಿಯ ಹಿಂದೆ ಇದ್ದವರು ಯಾರು? ಎಂಬುದು ಮುಖ್ಯವಾಗಿದೆ. ಈ ಹಿಂದೆ ಬಡ್ಡಿ ಹಣ ಕೊಡದ ಯುವಕನ ಮೇಲೆ ಹಲ್ಲೆ ಮಾಡಿದ್ದ ಈತ, ಅವರ ಸಂಬಂಧಿಕರ ಕಂಗೆಣ್ಣಿಗೆ ಗುರಿಯಾಗಿದ್ದ. ಆಗ ಗದಗನಲ್ಲಿ ಯಾವಾಗಲೂ ಹವಾ ಮೆಂಟೇನ್ ಮಾಡಿದ ಕುಟುಂಬದ ವ್ಯಕ್ತಿ ಬಂದು ರಾಜೀ ಪಂಚಾಯತಿ ನಡೆಸಿ ಪೊಲೀಸ್ ಠಾಣೆಯ ಮೆಟ್ಟಲು ಹತ್ತದಂತೆ ನೋಡಿಕೊಳ್ಳಲಾಯಿತು ಎನ್ನಲಾಗಿದೆ.

ರೌಡಿಗಳ ಹಾವಳಿಗೆ ಕಡಿವಾಣ ಯಾವಾಗ?

ಒಂದು ವರ್ಷದಿಂದಲೂ ಕೆಲವು ರೌಡಿಗಳು ಬಾಲ ಬಿಚ್ಚಿದ್ದಾರೆ. ಅಲ್ಲಲ್ಲಿ ಬೆದರಿಕೆ ಹಾಕೋದು, ಹಲ್ಲೆ ಮಾಡೋದು ನಡೆದೇ ಇದೆ. ಆದರೆ ಆ ಪ್ರಕರಣಗಳು ಪೊಲೀಸರ ಗಮನಕ್ಕೆ ಬಂದಿಲ್ಲ. ಈಗಲೂ ರಾತ್ರಿ ಆದರೆ ಸಾಕು ಮುಳಗುಂದ ನಾಕಾ, ಕಳಸಾಪುರ ರಸ್ತೆಯ ಸೇವಾಲಾಲ್ ಸರ್ಕಲ್ ಮುಂತಾದ ಪ್ರದೇಶಗಳಲ್ಲಿ ಮರಿ ಪುಡಾರಿಗಳ ದಂಡೇ ನಿಲ್ಲುತ್ತೆ. ಇತ್ತೀಚೆಗೆ ಇಬ್ಬರ ಯುವಕರ ಮಧ್ಯೆ ನಡೆದ ಸಂಭಾಷಣೆ (ಕೊಂದ ಬಿಡ್ತೀನಿ) ಅನ್ನೋ ಆಡಿಯೋ ವೈರಲ್ ಆಗಿತ್ತು. ಇಂತಹ ಮರಿಪುಡಾರಿಗಳ, ರೌಡಿ ಶೀಟರ್‌ಗಳ ಹೆಡಮುರಿ ಕಟ್ಟಿ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಹಿರಿಯ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.

ತನಿಖೆ ನಡೆಸುತ್ತಿದ್ದೇವೆ

ಭಾನುವಾರ ರಾತ್ರಿ ೧೦.೩೦ರಿಂದ ೧೧ ಗಂಟೆ ಸುಮಾರಿಗೆ ಮುತ್ತು ಚಲವಾದಿ ಅನ್ನೋ ಯುವಕನಿಗೆ ಯಾರೋ ದುಷ್ಕರ್ಮಿಗಳು ಚುಚ್ಚಿ ಸಾಯಿಸಿದ್ದಾರೆ. ನೈಟ್ ಬೀಟ್‌ನವರು ನಗರ ಠಾಣೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸುತ್ತೇವೆ,

  • ಎನ್ ಯತೀಶ್, ಎಸ್ಪಿ

ಬಡ್ಡಿ ದಂಧೆ ಮಾಡುವವನಿಂದಲೇ ಕೊಲೆ

ರಾತ್ರಿ ೮ ಗಂಟೆಯವರೆಗೆ ಮನೆಯಲ್ಲಿಯೇ ಮಲಗಿದ್ದ. ಅವಾಗ ಯಾರೋ ಗೆಳೆಯರು ಅಂತ ಕರೆ ಮಾಡಿ ಪಾರ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಅವನಿಗಾಗಿಯೇ ಚಿಕನ್ ಊಟ ಮಾಡಿಸಿ ಕಾದು ಕುಳಿತಿದ್ವಿ ರಾತ್ರಿ ೧೦.೩೦ ಗಂಟೆ ಸುಮಾರಿಗೆ ಕೊಲೆಯಾಗಿದೆ ಬನ್ನಿ ಅಂತ ಕರೆದರು. ಇನ್ನೆರಡು ದಿನದಲ್ಲಿ ಅವನಿಗೆ ಕನ್ಯೆ ನಿಶ್ಚಯ ಮಾಡುವ ಹಂತದಲ್ಲಿ ಇದ್ದೆವು. ಬಡ್ಡಿ ದಂಧೆ ಮಾಡುವವನೇ ಕೊಲೆ ಮಾಡಿದ್ದಾನೆ. ಅವನಿಗೆ ಗಲ್ಲುಶಿಕ್ಷೆಯಾಗಲಿ.

  • ಯಲ್ಲಪ್ಪ ಚಲವಾದಿ, ಕೊಲೆಯಾದ ಯುವಕನ ತಂದೆ

Spread the love

LEAVE A REPLY

Please enter your comment!
Please enter your name here