ವಿಜಯಸಾಕ್ಷಿ ಸುದ್ದಿ, ಮೈಸೂರು
ಮೈಸೂರಿನಲ್ಲೂ ಬೆಂಗಳೂರು ಮಾದರಿಯಲ್ಲಿ ಸಿಂಗಲ್ ಬೆಡ್, ಡಬಲ್ ಬೆಡ್, ತ್ರಿಬಲ್ ಬೆಡ್ ಗಳ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಮೈಸೂರಿನ ಮೊದಲ ಟೌನ್ ಶಿಪ್ ಗೆ ಈಗಾಗಲೇ ಭೂಮಿ ಗೊತ್ತುಪಡಿಸಿದ್ದೇವೆ ಎಂದು ಸಹಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸದ ಸಚಿವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ 22 ಎಕರೆಯಲ್ಲಿ 2500 ಸೈಟ್ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಜೊತೆ ಮಾತನಾಡಿದ್ದೇನೆ. ಬಿಡಿಎ ಮಾದರಿಯಲ್ಲಿ ಮುಡಾದಿಂದಲೂ ಜನರಿಗೆ ಅನುಕೂಲವಾಗುವಂತೆ ಗುಂಪುಮನೆ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಮೈಸೂರು ಮುಡಾವನ್ನು ದಲ್ಲಾಳಿ ಮುಕ್ತ ಮಾಡುತ್ತೇವೆ. ದಲ್ಲಾಳಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ಅಧಿಕಾರಿ ದಲ್ಲಾಳಿಯನ್ನು ಸಂಪರ್ಕಿಸುವಂತೆ ಹೇಳಿದರೆ ತಕ್ಷಣ ಅಧ್ಯಕ್ಷರಿಗೆ, ಆಯುಕ್ತರಿಗೆ ದೂರು ನೀಡಿ. ಮುಡಾಗೆ ದಲ್ಲಾಳಿಗಳ ಪ್ರವೇಶ ತಡೆಯಲು ಪೊಲೀಸ್ ಟಾಸ್ಕ್ ಫೋರ್ಸ್ ರಚಿಸಲು ತಿಳಿಸಿದ್ದೇನೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.