-ಡಾ.ವಿಷ್ಣುಗೆ ಇಡೀ ಕುಟುಂಬವೇ ಫ್ಯಾನ್ಸ್
-ಅಭಿಮಾನಿ ಕುಟುಂಬದ ವಿಭಿನ್ನ ಮದುವೆ ಆಮಂತ್ರಣ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮನೆ ದೇವ್ರು, ಮಠಾಧೀಶರ, ವಧು-ವರರ ಹಾಗೂ ಕೆಲವೊಮ್ಮೆ ಕುಟುಂಬದವರ ಭಾವಚಿತ್ರ ಮುದ್ರಿಸುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಕುಟುಂಬ, ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಮುದ್ರಿಸಿ, ಅವರು ಅಭಿನಯಿಸಿದ ಚಿತ್ರಗಳ ಹೆಸರುಗಳ ಮೂಲಕವೇ ಮದುವೆಗೆ ಬನ್ನಿ ಎಂದು ಆಹ್ವಾನ ನೀಡಿದೆ.
ಜಿಲ್ಲೆಯ ಇರಕಲ್‌ಗಡಾದ ರಾಮಣ್ಣ ಕಾಟ್ರಳ್ಳಿ ಕುಟುಂಬ ಡಾ.ವಿಷ್ಣುವರ್ಧನ್ ಅವರ ಮೇಲೆ ಅಪಾರ ಅಭಿಮಾನ ಹೊಂದಿದೆ. ರಾಮಣ್ಣ ಕಾಟ್ರಳ್ಳಿಯವರ ಶ್ರೀಮತಿ ಹುಲಿಗೆಮ್ಮ ಅವರು ವಿಷ್ಣುದಾದಾಗೆ ದೊಡ್ಡ ಫ್ಯಾನ್. ಮದುವೆ ಗಂಡು ಶರಣಪ್ಪ ಚಿಕ್ಕಂದಿನ ದಿನಗಳಲ್ಲಿ ವಿಷ್ಣು ಅಭಿನಯದ ಯಜಮಾನ ಸಿನಿಮಾ ನೋಡಿ ಆವತ್ತಿನಿಂದ ಇವತ್ತಿನವರೆಗೂ ವಿಷ್ಣು ಅವರ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ.
ಜುಲೈ 4ರಂದು ಇರಕಲ್‌ಗಡಾದಲ್ಲಿ ಮನೆ ಮುಂದೆಯೇ ರಾಮಣ್ಣ ಕಾಟ್ರಳ್ಳಿಯವರು ತಮ್ಮ ಪುತ್ರರಾದ ಶರಣಪ್ಪ ಮತ್ತು ಮಂಜುನಾಥ ಅವರ ಮದುವೆ ಹಮ್ಮಿಕೊಂಡಿದ್ದು ಬಂಧುಮಿತ್ರರನ್ನು ಆಹ್ವಾನಿಸಲು ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಶ್ರೀಗಳ, ದೇವರ ಮೂರ್ತಿಗಳ ಚಿತ್ರದ ಜೊತೆ ಡಾ.ವಿಷ್ಣುವರ್ಧನ್ ಫೋಟೋ ಮುದ್ರಿಸಿ, ಅವರ ಸಿನಿಮಾ ಹೆಸರುಗಳ ಮೂಲಕವೇ ಮದುವೆಗೆ ಆಹ್ವಾನ ನೀಡಿದ್ದು ವಿಭಿನ್ನವಾಗಿದೆ.
ಈ ಮೂಲಕ ವಿಷ್ಣುದಾದಾ ದೈಹಿಕವಾಗಿ ಜೊತೆಗಿರದಿದ್ದರೂ ಅಭಿಮಾನದ ರೂಪದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಆಹ್ವಾನ ಪತ್ರಿಕೆ ಸಾಕ್ಷಿಯಾಗಿದೆ.
ನೂತನ ವಧು-ವರರಿಗೆ ಶುಭವಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.