ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲಾದ್ಯಂತ ನಿನ್ನೆ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದ್ದು, ಬೆಳಗ್ಗೆಯೂ ಜಿಟಿಜಿಟಿ ಮಳೆ ಮುಂದುವರೆದಿದೆ. ಉತ್ತರಿ ಮಳೆಗೆ ರೈತರು ಮತ್ತು ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.
ಜಿಲ್ಲೆಯ ಕುಕನೂರು ತಾಲೂಕು ಬೆಣಕಲ್ ಗ್ರಾಮದಲ್ಲಿ ಚನ್ನಪ್ಪ ಬಳಗೇರಿ ಎಂಬುವರ ಮಣ್ಣಿನ ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು, ಮಲಗಿದಲ್ಲೇ ಆಕಳು ಮೃತಪಟ್ಟಿದೆ. ಮನೆಯಲ್ಲಿ ಮಲಗಿದ್ದ ಚನ್ನಪ್ಪ ಬಳಗೇರಿ ಅವರ ಮಗ ಮಂಜುನಾಥ ಬಳಗೇರಿ(28) ಗಂಭೀರ ಗಾಯಗೊಂಡಿದ್ದಾನೆ.
ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಮಣ್ಣಿನಲ್ಲಿ ಮುಚ್ಚಿ ಹೋಗಿರುವ ಮೃತ ಆಕಳ ಕಳೆಬರ ಹೊರ ತೆಗೆಯಲು ಗ್ರಾಮಸ್ಥರ ಹರಸಾಹಸ ಮಾಡುತ್ತಿದ್ದಾರೆ.
ಇನ್ನು ಈ ಜಿಟಿಜಿಟಿ ಮಳೆ ಕೊಪ್ಪಳ ಜಿಲ್ಲಾದ್ಯಂತ ಇದ್ದು, ಜಿಲ್ಲೆಯ ಬಹುತೇಕ ಕಡೆ ಹಳ್ಳ- ಕೊಳ್ಳ ತುಂಬಿ ಹರಿಯುತ್ತಿವೆ. ಅಪಾರ ಬೆಳೆ ಮತ್ತು ಆಸ್ತಿ ಹಾನಿಯಾಗಿದ್ದು, ಮಳೆ ಮುಂದುವರೆದ ಹಿನ್ನೆಲೆ ಇನ್ನೂ ಪಕ್ಕಾ ಮಾಹಿತಿ ಲಭ್ಯವಾಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.