ವಿಜಯಸಾಕ್ಷಿ ಸುದ್ದಿ, ಗದಗ
ಡಿಕೆಶಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸೇರಿದರೆ ಒಳ್ಳೆಯದು ಎಂದು ಹೇಳುವ ಮೂಲಕ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಹರಿಹಾಯ್ದಿದ್ದಾರೆ.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲಾಪಾನಿ ಶಿಕ್ಷೆ ಅಂದರೆ ಡಿಕೆಶಿಗೆ ಗೊತ್ತಿದೆಯಾ? ಟಿಪ್ಪು ಸುಲ್ತಾನನ ಕೊಡುಗೆ ಏನಿದೆ? ಟಿಪ್ಪುಸುಲ್ತಾನ್ ಭಾವಚಿತ್ರ ಹರಿದವರನ್ನು ಬಂದಿಸಬೇಕಾ? ಸಾವರ್ಕರ್ ಭಾವಚಿತ್ರ ತೆರವು ಮಾಡಿದವರನ್ನು ಮೆರವಣಿಗೆ ಮಾಡಬೇಕಾ? ತುಷ್ಟಿಕರಣಕ್ಕೆ ಇತಿಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಪ್ರತಿಪಕ್ಷ ನಾಯಕರ ಕೈಗೆ ದೇಶ, ರಾಜ್ಯ ಸಿಕ್ಕರೆ ಏನಾಗುತ್ತದೆ.? ಕೇವಲ ಓಟ್ ಬ್ಯಾಂಕ್‍ಗಾಗಿ ಮತ್ತೊಮ್ಮೆ ಶಾಸಕರಾಗಲು ರಾಜ್ಯ, ದೇಶವನ್ನು ಅಡವಿಡುವ ಕೆಲಸ ಮಾಡಬಾರದು. ಸಾವರ್ಕರ್ ಅವರ ಹೋರಾಟದ ಪ್ರತಿಫಲವಾಗಿಯೇ ಇಂದು ಸಾವಿರಾರು ಕೋಟಿ ಒಡೆಯರಾಗಿ ಮೆರೆಯುತ್ತಿದ್ದಾರೆ ಅಂತ ಡಿಕೆಶಿ ವಿರುದ್ದ ಕಿಡಿಕಾರಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ಮಾರ್ಕೆಟಿಂಗ್ ಕಮ್ಯುನಿಕೇಶನ್ ಆ್ಯಂಡ್ ಅಡ್ವರ್ಟೈಸಿಂಗ್ ನಿಗಮದ ಅಧ್ಯಕ್ಷ ಎಮ್ ಎಸ್ ಕರಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದು ಪಲ್ಲೆದ, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ರಾಜು ಕುರುಡಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.