ವಿಜಯಸಾಕ್ಷಿ ಸುದ್ದಿ, ಗದಗ
ಸುಮಾರು ವರ್ಷಗಳಿಂದ ಮಾರಾಟ ಮಾಡಿದ್ದ ಕೃಷಿ ಹುಟ್ಟುವಳಿಯ ಹಣವನ್ನು ಕೊಡು ಎಂದು ಕೇಳಲು ಹೋದ ರೈತನ ಮೇಲೆ ದಲಾಲಿ ಅಂಗಡಿಯ ಮಾಲೀಕರು ಮಚ್ಚಿನಿಂದ ಹಲ್ಲೆ ಮಾಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಎಪಿಎಂಸಿಯಲ್ಲಿ ನಡೆದಿದೆ.
ಗಜೇಂದ್ರಗಡ ಮೂಲದ ಚನ್ನಬಸಪ್ಪ ಶಿವಪ್ಪ ವಾಲಿ ಹಾಗೂ ಮಂಜು ಚನ್ನಬಸಪ್ಪ ವಾಲಿ ಎಂಬುವವರೇ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ. ಹಲ್ಲೆ ನಡೆಸಿದ್ದರ ಪರಿಣಾಮವಾಗಿ ರೈತ ಯಂಕಪ್ಪ ನಿಂಗಪ್ಪ ಸೊನ್ನದ ಅವರ ಎಡಗಾಲಿನ ಮೂಳೆ ಮೂರಿದಿದೆ.
ಗಂಜಿಪೇಟೆ ನಿವಾಸಿ ಯಂಕಪ್ಪ ನಿಂಗಪ್ಪ ಸೊನ್ನದ ಎಂಬುವವರು ಪಟ್ಟಣದ ಶಿವಪ್ಪ ಸಂಗಪ್ಪ ವಾಲಿನಾಮೆಯ ಎಂಬ ದಲಾಲಿ ಅಂಗಡಿಯಲ್ಲಿ ತಮ್ಮ ಅಣ್ಣಂದಿರ ಹೊಲದಲ್ಲಿ ಬೆಳೆದ ಕೃಷಿ ಹುಟ್ಟುವಳಿಯನ್ನು (ಬೆಳೆ) ಹಲವು ವರ್ಷಗಳಿಂದ ಮಾರಾಟ ಮಾಡಿದ್ದು, ಸುಮಾರು 8 ಲಕ್ಷ ರೂ. ಬಿಲ್ ಆಗಿದೆ.
ಕೃಷಿ ಹುಟ್ಟುವಳಿ ಮಾರಿದ ರೈತ ರೈತ ಯಂಕಪ್ಪ ಹಣ ಕೊಡು ಎಂದು ಕೇಳಿದಾಗ ಇಂದು ನಾಳೆ ಕೊಡುವುದಾಗಿ ಆರೋಪಿಗಳಿಬ್ಬರೂ ಹೇಳುತ್ತಾ ದಿನಗಳನ್ನು ದೂಡುತ್ತಾ ಬಂದಿದ್ದಾರೆ. ಮಾ.2 ರಂದು ಯಂಕಪ್ಪ ಪುನಃ ಹಣ ಕೇಳಲು ಹೋದಾಗ ಮಾ.3ರಂದು ಬ್ಯಾಂಕ್ ಅವಧಿ ಮುಗಿದ ಮೇಲೆ ಕೊಡುವುದಾಗಿ ಆರೋಪಿಗಳು ಭರವಸೆ ನೀಡಿದ್ದಾರೆ. ಆದರೆ, ಆರೋಪಿತರು ಕೊಟ್ಟ ಮಾತಿಗೆ ತಪ್ಪಿದ್ದು, ಮಾ.3 ರಂದು ಇನ್ನೂ ಆರು ತಿಂಗಳು ಕಾಲಾವಕಾಶ ಕೊಡಿ. ಸದ್ಯ ನಮ್ಮಿಂದ ನಿಮಗೆ ಹಣ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿಗೆ ನೀಡದ ರೈತ ಯಂಕಪ್ಪ ಹಣ ಕೊಡುವಂತೆ ಪಟ್ಟು ಹಿಡಿದಿದ್ದಾನೆ. ಈ ವೇಳೆ ಆರೋಪಿಗಳಾದ ಚನ್ನಬಸಪ್ಪ ಹಾಗೂ ಮಂಜು ಎಂಬ ಆರೋಪಿಗಳು ರೈತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ,ಮಚ್ಚಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
ಕೃಷಿ ಹುಟ್ಟುವಳಿ ಮಾರಾಟ ಮಾಡಿದ ಹಣ ಕೊಡುವ ವಿಷಯದಲ್ಲಿ ವಂಚಿಸಿರುವ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.