ರಾಯಚೂರು: ಕಲಿಯುಗ ಕಾಮಧೇನು ಎಂದೇ ಖ್ಯಾತಿ ಪಡೆದಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರ ಭಕ್ತಿ ವೈಭವ ಮತ್ತೊಮ್ಮೆ ಅನಾವರಣಗೊಂಡಿದೆ.
ಮಠದಲ್ಲಿ ಕಳೆದ 22 ದಿನಗಳ ಅವಧಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು ₹4.35 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದಿದ್ದರು. ಪರಿಣಾಮವಾಗಿ ಅಲ್ಪ ಅವಧಿಯಲ್ಲೇ ಹುಂಡಿಗೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ.
ಹುಂಡಿ ಎಣಿಕೆ ವೇಳೆ ಒಟ್ಟು ₹4,25,25,136 ಕಾಣಿಕೆ ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ₹4,19,97,861 ಮೌಲ್ಯದ ಕರೆನ್ಸಿ ನೋಟುಗಳು ಹಾಗೂ ₹15,27,275 ಮೌಲ್ಯದ ನಾಣ್ಯಗಳು ಸೇರಿವೆ. ಇದರ ಜೊತೆಗೆ ಭಕ್ತರು 46 ಗ್ರಾಂ ಚಿನ್ನ ಮತ್ತು 750 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.
ಮಂತ್ರಾಲಯ ರಾಯರ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಕರಸೇವಕರು ಹಾಗೂ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ಎಣಿಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಸಂಪೂರ್ಣ ಕಾರ್ಯ ಮುಗಿಯಿತು.
ಈ ವೇಳೆ ಕರ್ನೂಲು ಜಿಲ್ಲಾ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ಸುಧಾಕರ ರೆಡ್ಡಿ ಸೇರಿದಂತೆ ಶ್ರೀಮಠದ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದು ಎಣಿಕೆ ಕಾರ್ಯದ ಮೇಲ್ವಿಚಾರಣೆ ನಡೆಸಿದರು.
ಭಕ್ತರ ನಂಬಿಕೆ ಮತ್ತು ಗುರುರಾಯರ ಮೇಲಿನ ಅಪಾರ ಭಕ್ತಿಯ ಪ್ರತೀಕವಾಗಿ ಈ ಬಾರಿ ಹುಂಡಿಗೆ ದಾಖಲೆ ಪ್ರಮಾಣದ ಕಾಣಿಕೆ ಹರಿದು ಬಂದಿರುವುದು ಮಠದ ಆಡಳಿತ ಮಂಡಳಿಯಲ್ಲಿ ಸಂತಸ ಮೂಡಿಸಿದೆ.



