‘ಟಾಕ್ಸಿಕ್’ ಸಿನಿಮಾ ಸದ್ಯ ಸ್ಯಾಂಡಲ್ವುಡ್ನಲ್ಲೇ ಹಾಟ್ ಟಾಪಿಕ್ ಆಗಿದೆ. ಯಶ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರಕ್ಕೆ ಟ್ರೇಲರ್ ಬಿಡುಗಡೆಯಾದ ಬಳಿಕ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಇದೀಗ ಸಿನಿಮಾದ ತಾರೆಯರ ಸಂಭಾವನೆ ಕುರಿತು ಕೇಳಿಬರುತ್ತಿರುವ ಅಂಕಿಅಂಶಗಳು ಅಭಿಮಾನಿಗಳ ಗಮನ ಸೆಳೆದಿವೆ. ಗೀತೂ ಮೋಹನ್ದಾಸ್ ನಿರ್ದೇಶನದ ಸಿನಿಮಾ ಆಗಸ್ಟ್ 26ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ.
ಮಾಧ್ಯಮ ವರದಿಗಳ ಪ್ರಕಾರ ಸಿನಿಮಾದಲ್ಲಿ ರಾಯ ಮತ್ತು ಟಿಕೆಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ಗೆ 50 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ವಿಶೇಷವೆಂದರೆ ಯಶ್ ಕೇವಲ ನಟನಾಗಿ ಮಾತ್ರವಲ್ಲದೆ ಸಹ-ಬರಹಗಾರ ಮತ್ತು ಸಹ-ನಿರ್ಮಾಪಕರಾಗಿಯೂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಲಾಭದಲ್ಲೂ ಅವರಿಗೆ ಪಾಲು ದೊರೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ‘ಟಾಕ್ಸಿಕ್’ ಸಿನಿಮಾದ ಪ್ರಮುಖ ತಾರೆಯರ ಸಂಭಾವನೆಯ ಬಗ್ಗೆಯೂ ಹಲವು ವರದಿಗಳು ಹರಿದಾಡುತ್ತಿವೆ. ಕಿಯಾರಾ ಅಡ್ವಾಣಿ ಅವರಿಗೆ 15 ಕೋಟಿ ರೂ. ಸಂಭಾವನೆ ಸಿಕ್ಕಿದೆ ಎನ್ನಲಾಗಿದ್ದು, ನಯನತಾರಾ ಅವರಿಗೆ 12ರಿಂದ 18 ಕೋಟಿ ರೂ.ವರೆಗೆ ನೀಡಲಾಗಿದೆ ಎಂದು ವರದಿಯಾಗಿದೆ.
ರುಕ್ಮಿಣಿ ವಸಂತ್ ಅವರಿಗೆ 3ರಿಂದ 5 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ‘ಕಾಂತಾರ: ಅಧ್ಯಾಯ 1’ ಯಶಸ್ಸಿನ ಬಳಿಕ ರುಕ್ಮಿಣಿ ಅವರ ಸಂಭಾವನೆ ಹೆಚ್ಚಾಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಮತ್ತೊಂದೆಡೆ ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ತಲಾ 2ರಿಂದ 3 ಕೋಟಿ ರೂ. ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಈ ಮೊತ್ತಗಳೆಲ್ಲವೂ ಸದ್ಯ ಮಾಧ್ಯಮ ವರದಿಗಳಲ್ಲಷ್ಟೇ ಕಾಣಿಸಿಕೊಂಡಿದ್ದು, ‘ಟಾಕ್ಸಿಕ್’ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಸಂಭಾವನೆ ವಿವರ ಬಹಿರಂಗವಾಗಿಲ್ಲ. ಹೀಗಾಗಿ ವರದಿಯಾಗಿರುವ ಮೊತ್ತಗಳು ನಿಖರವೇ ಎಂಬುದು ಸ್ಪಷ್ಟವಾಗಿಲ್ಲ.
ಚಿತ್ರವು ಈ ಹಿಂದೆ ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್ 4ಕ್ಕೆ ಮುಂದೂಡಲಾಗಿತ್ತು. ಇದೀಗ ಆಗಸ್ಟ್ 26ರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಯಶ್ ಅವರ ದ್ವಿಪಾತ್ರ, ಭರ್ಜರಿ ತಾರಾಗಣ ಮತ್ತು ಟ್ರೇಲರ್ನಲ್ಲಿನ ಆಕ್ಷನ್ ದೃಶ್ಯಗಳು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.



